ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ 'TCS 10K' ಮ್ಯಾರಥಾನ್‌ಗೆ ತೆರೆ ಬಿದ್ದಿದೆ. ಇಂದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಪರೇಡ್ ಮೈದಾನದಿಂದ ಆರಂಭವಾಗಿ ವಿಧಾನಸೌಧ, ಹಲಸೂರು ಲೇಕ್ ಮತ್ತಿತರ ಸ್ಥಳಗಳಿಂದ ಸಾಗಿ ಅಂತ್ಯಗೊಂಡ ಮ್ಯಾರಥಾನ್‌ನಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು 28,600 ಉತ್ಸಾಹಿ ಓಟಗಾರರು ಭಾಗಿಯಾಗಿದ್ದರು.
ಓಟ ಪೂರ್ಣಗೊಳಿಸಿದ 96ರ ಉತ್ಸಾಹಿ: 96 ವರ್ಷ ಹರೆಯದ ಎನ್.ಎಸ್.ದತ್ತಾತ್ರೇಯ 'ಓಪನ್ 10K' ಪೂರ್ಣಗೊಳಿಸಿದ ಹಿರಿಯ ಓಟಗಾರ ಎನಿಸಿಕೊಂಡರು. ಅವರಷ್ಟೇ ಅಲ್ಲದೇ ಜನರಲ್ ರಾಜಿಂದರ್ ದಿವಾನ್, ಮೇಜರ್ ಜನರಲ್ ರವಿ ಮುರುಗನ್, ಲೆಫ್ಟಿನೆಂಟ್ ಜನರಲ್ ಡಾ. ಪ್ರದೀಪ್ ಸಿ.ನಾಯರ್, ರಾಜ್ಯ ಪೋಲೀಸ್‌ನ ಹೆಚ್ಚುವರಿ ಆಯುಕ್ತ ಎಸ್.ರವಿ, ಐಜಿಪಿ ಸಂದೀಪ್ ಪಾಟೀಲ್ ಸೇರಿದಂತೆ 18,433 ಓಟಗಾರರು ಓಪನ್ 10K ವಿಭಾಗದಲ್ಲಿ ಭಾಗಿಯಾಗಿದ್ದರು. 5 ಕಿ.ಮೀ ಮಜಾ ರನ್ ವಿಭಾಗದಲ್ಲಿ 9,932 ಮಂದಿ, ಹಿರಿಯ ನಾಗರಿಕರ ಸಿಲ್ಬರ್ ರನ್ ವಿಭಾಗದಲ್ಲಿ 1318 ಜನರು, 513 ವಿಶೇಷಚೇತನರು ಚಾಂಪಿಯನ್ಸ್‌ನಲ್ಲಿ ಭಾಗವಹಿಸಿ ವೈಯಕ್ತಿಕ ಮೈಲಿಗಲ್ಲು ಸೃಷ್ಟಿಸಿದರು.
ಮತ್ತೆ ಪ್ರಶಸ್ತಿ ಕೀನ್ಯಾ ಪಾಲು: 00:28:15 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ತಲುಪಿದ ಕೀನ್ಯಾದ ಪೀಟರ್ ಮ್ವಾನಿಕಿ 'TCS ವರ್ಲ್ಡ್ 10K ಬೆಂಗಳೂರು - 2024'ರ ಪುರುಷರ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಮಹಿಳಾ ವಿಭಾಗದಲ್ಲಿ ಕೀನ್ಯಾದವರೇ ಆದ ಲಿಲಿಯನ್ ಕಸಾಯಿಟ್ 00:30:56 ಸೆಕೆಂಡ್‌ಗಳಲ್ಲಿ ಅಂತಿಮ ಗೆರೆ ದಾಟುವ ಮೂಲಕ ಟಾಪರ್ ಆಗಿ ಹೊರಹೊಮ್ಮಿದರು.
ಭಾರತೀಯರ ಸಾಧನೆ: ಭಾರತೀಯ ಪುರುಷ ವಿಭಾಗದಲ್ಲಿ 00:29:32 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಕಿರಣ್ ಮಾತ್ರೆ ಟಾಪರ್ ಎನಿಸಿದರೆ, ಮಹಿಳಾ ವಿಭಾಗದಲ್ಲಿ 00:34:03 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಸಂಜೀವನಿ ಜಾಧವ್ ಟಾಪರ್ ಆಗಿ ಹೊರಹೊಮ್ಮಿದರು.
ಮುಂಜಾನೆ 4 ಗಂಟೆಯಿಂದಲೇ ರಾಜೇಂದ್ರ ಸಿಂಗ್‌ಜಿ ಆರ್ಮಿ ಆಫೀಸರ್ಸ್ ಇನ್‌ಸ್ಟಿಟ್ಯೂಟ್ ಕ್ರಿಕೆಟ್ ಮೈದಾನದ ಬಳಿ ಜಮಾಯಿಸಿದ ಸಾವಿರಾರು ಜನ ಆಟಗಾರರು ಸ್ಯಾಮ್ ಮಾಣೆಕ್ ಶಾ ಪರೇಡ್ ಮೈದಾನದಿಂದ ತಮ್ಮ ಉತ್ಸಾಹದ ಓಟವನ್ನು ಪ್ರಾರಂಭಿಸಿರು. ನಂತರ ವಿಧಾನಸೌಧ ಮತ್ತು ಹಲಸೂರು ಲೇಕ್ ಸೇರಿ ಮತ್ತಿತರ ಸ್ಥಳಗಳನ್ನು ಸುತ್ತುವರೆದು ನಿಗದಿತ ಸ್ಥಳ ತಲುಪಿದರು.