ಶಿವಮೊಗ್ಗ: ವಿಪಕ್ಷಗಳ ಮೈತ್ರಿಕೂಟದಲ್ಲಿ ಪ್ರಧಾನಿಯಾಗಬೇಕೆಂಬ ಬಯಕೆ ಎಲ್ಲರಿಗೂ ಇದೆ. ಲಾಲು ಪ್ರಸಾದ್ ಯಾದವ್, ಫಾರೂಕ್ ಅಬ್ದುಲ್ಲಾ, ಮಮತಾ ಬ್ಯಾನರ್ಜಿ, ಸ್ಟಾಲಿನ್ಗೆ ಪ್ರಧಾನಿಯಾಗಬೇಕೆಂಬ ಆಸೆ ಇದೆ. ಜೊತೆಗೆ ರಾಹುಲ್ ಗಾಂಧಿಯವರಿಗೆ ಕಳೆದ 20 ವರ್ಷಗಳಿಂದ ಪ್ರಧಾನಿಯಾಗಬೇಕೆಂಬ ಬಯಕೆ ಇದೆ. ಇಂಡಿಯಾ ಮೈತ್ರಿಕೂಟ 8 ತಿಂಗಳಿಂದ ಪ್ರಧಾನಿ ಅಭ್ಯರ್ಥಿಯನ್ನು ಹುಡುಕುತ್ತಿದೆ. ದೇಶದಲ್ಲಿ ಮೊದಲ ಹಂತದ ಮತದಾನ ನಡೆದಿದೆ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾರೆಂದು ಗೊತ್ತಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.
ಭದ್ರಾವತಿಯ ಕನಕ ಮಂಟಪದಲ್ಲಿ ಬುಧವಾರ ಬಿಜೆಪಿ ಪರವಾಗಿ ಮತ ಪ್ರಚಾರದ ಬೃಹತ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೌನ್ ಬನೇಗಾ ಕರೋಡ್ ಪತಿ ಎಂಬ ಮಾತಿದೆ, ಅದರಂತೆ ಇಂಡಿಯಾ ಮೈತ್ರಿಕೂಟದಲ್ಲಿ ಈಗ ಕೌನ್ ಬನೇಗಾ ಪ್ರಧಾನಮಂತ್ರಿ ಎಂಬಂತಾಗಿದೆ. ಈ ದೇಶಕ್ಕೆ ಪ್ರಧಾನಮಂತ್ರಿ ಬಹಳ ಮುಖ್ಯ, ಪ್ರಧಾನಿಯಾಗುವ ವ್ಯಕ್ತಿ ಯಾರು, ಆತನ ಪ್ಲಸ್ - ಮೈನಸ್ ಏನು ಎಂದು ಗೊತ್ತಿರಬೇಕು. 10 ವರ್ಷ ಪ್ರಧಾನಿಯಾಗಿದ್ದ ಮೋದಿಯವರಿಗೆ ಮತ್ತೊಂದು ಐದು ವರ್ಷ ಅಧಿಕಾರಿ ಕೊಡಲು ನಾವೆಲ್ಲ ತಯಾರಾಗಿದ್ದೇವೆ. ಮೋದಿಯವರಿಗಿಂತ ಮುಂಚೆ ದೇಶದಲ್ಲಿ ಯಾರೊಬ್ಬ ದೊಡ್ಡ ಲೀಡರ್ ಇರಲಿಲ್ಲ. 2014ರಲ್ಲಿ ನ್ಯಾಷನಲ್ ಲೀಡರ್ ಆಗಿ ಮೋದಿಯವರು ಪ್ರಧಾನಮಂತ್ರಿಯಾಗಿದ್ದರು ಎಂದು ಹೇಳಿದರು.