ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಅಧಿಕಾರ ದುರ್ಬಳಕೆ ಮಾಡಿ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ತಮ್ಮ ಪತ್ನಿಯ ಹೆಸರಿಗೆ ಪಡೆದುಕೊಂಡಿರುವ ಆರೋಪ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವುದಕ್ಕೆ ಸೂಚನೆ ನೀಡಬೇಕು ಎಂದು ಕೋರಿ ಬೆಂಗಳೂರಿನ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆಯಾಗಿದೆ.
ಮೈಸೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಎಂಬುವರು ಸಲ್ಲಿಸಿದ್ದ ಖಾಸಗಿ ದೂರಿನ ಸಂಬಂಧ ಆದೇಶ ಹೊರ ಬರುವುದಕ್ಕೂ ಮುನ್ನ ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ಜೆ. ಅಬ್ರಾಹಂ ಮತ್ತೊಂದು ದೂರು ಸಲ್ಲಿಸಿದ್ದಾರೆ. ಸೋಮವಾರ ಸಂಜೆ ದೂರು ಸಲ್ಲಿಸಿದ್ದು, ಇಂದು (ಮಂಗಳವಾರ) ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಮೂಲ ಜಮೀನಿಗೆ ಮಾಲೀಕರೇ ಇಲ್ಲ. ಆ ಜಮೀನು ಸಿದ್ದರಾಮಯ್ಯ ಸಂಬಂಧಿಕರ ಹೆಸರಿಗೆ ಬಂದಿದೆ. ಅಲ್ಲಿಂದ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಉಡುಗೊರೆಯಾಗಿ ಬಂದಿದ್ದು, ಅಂತಹ ಜಮೀನಿಗೆ ಬದಲಿ ನಿವೇಶನ ಪಡೆದುಕೊಳ್ಳಲಾಗಿದೆ. ಈ ಪ್ರಕ್ರಿಯೆ ಇಲ್ಲದ ಜಮೀನಿಗೆ ಬದಲಿ ನಿವೇಶನ ಪಡೆದುಕೊಂಡಂತಿದೆ. ಪರೋಕ್ಷವಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಆರೋಪದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.