ಕರ್ನಾಟಕ

karnataka

By ETV Bharat Karnataka Team

Published : Mar 24, 2024, 10:42 AM IST

ETV Bharat / state

ಕುಕ್ಕೆ ಸುಬ್ರಹ್ಮಣ್ಯ: ಮನೆಯೊಂದಕ್ಕೆ ಭೇಟಿ ನೀಡಿದ ಶಂಕಿತ ನಕ್ಸಲರು! - Suspected Naxals Visit

ಸುಬ್ರಹ್ಮಣ್ಯದ ಗ್ರಾಮವೊಂದಕ್ಕೆ ನಕ್ಸಲರ ತಂಡ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಗ್ರಾಮಕ್ಕೆ ಪೊಲೀಸರು, ನಕ್ಸಲ್ ನಿಗ್ರಹ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

NAXALS AT DAKSHINA KANNADA
NAXALS AT DAKSHINA KANNADA

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ಇಲ್ಲಿನ ಐನೆಕಿದು ಗ್ರಾಮದ ಕೋಟೆ ತೋಟದ ಮಜಲು ಎಂಬಲ್ಲಿಗೆ ಶನಿವಾರ ಸಂಜೆ ನಾಲ್ಕೈದು ಜನ ಅಪರಿಚಿತರು ಬಂದು ಹೋಗಿದ್ದು, ನಕ್ಸಲರಿರಬಹುದೇ ಎಂಬ ಗುಮಾನಿ ಈ ಪ್ರದೇಶದಲ್ಲಿ ಹಬ್ಬಿದೆ. ಗ್ರಾಮಸ್ಥರೊಬ್ಬರ ಮನೆಗೆ ಬಂದಿದ್ದ ಅಪರಿಚಿತರು ಸುಮಾರು ಒಂದು ಗಂಟೆಗಳ ಕಾಲ ಇದ್ದು ಹಲವು ವಿಚಾರಗಳನ್ನು ವಿಚಾರಿಸಿರುವುದಾಗಿ ತಿಳಿದು ಬಂದಿದೆ. ಜೊತೆಗೆ ಮೊಬೈಲ್ ಚಾರ್ಚ್ ಮಾಡಿಕೊಂಡು ತೆರಳಿದ್ಧಾರೆ ಎನ್ನಲಾಗಿದೆ.

ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಸಣ್ಣದಾಗಿ ಮಳೆಯಾಗುತ್ತಿದ್ದ ಸಂದರ್ಭದಲ್ಲಿ ಶಂಕಿತರ ತಂಡ ಐನೆಕಿದು ಗ್ರಾಮದ ಅರಣ್ಯದಂಚಿನ ತೋಟದ ಮೂಲಕ ಆಗಮಿಸಿದ್ದರು. ತೋಟದಲ್ಲಿದ್ದ ಕೆಲಸದವರ ಶೆಡ್​ಗೆ ಭೇಟಿ ನೀಡಿದ ವೇಳೆ ಕೆಲಸದಾಳು ಶೆಡ್​​ನ ಬಾಗಿಲು ಹಾಕಿದ್ದು, ಬಳಿಕ ಶಂಕಿತರ ತಂಡ ಅಲ್ಲೇ ಪಕ್ಕದಲ್ಲಿನ ತೋಟದ ಮಾಲಿಕರ ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಿಂದ ಎರಡು ಕೆ.ಜಿಯಷ್ಟು ಅಕ್ಕಿ ಪಡೆದು ಬಳಿಕ ತಂಡ ಅಲ್ಲಿಂದ ತೆರಳಿದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಅವರು ಅರಣ್ಯ ಭಾಗದತ್ತ ತೆರಳಿರುವ ಶಂಕೆ ವ್ಯಕ್ತವಾಗತೊಡಗಿದೆ. ಮೂವರ ತಂಡ ಮನೆಯೊಳಗೆ ಬಂದಿದೆ ಎನ್ನಲಾಗಿದ್ದರೂ, ತಂಡದಲ್ಲಿ ನಾಲ್ಕೈದು ಮಂದಿ ಇರುವ ಶಂಕೆ ಇದೆ. ಮನೆಗೆ ಆಗಮಿಸಿದ ಶಂಕಿತರ ಕೈಯಲ್ಲಿ ಗನ್ ಮಾದರಿ ಇದ್ದಿದ್ದು, ಅದನ್ನು ಬಟ್ಟೆ ಅಥವಾ ಯಾವುದೋ ವಸ್ತುವಿನಿಂದ ಸುತ್ತಿ ಕವರ್ ಮಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಶಂಕಿತರು ಮನೆಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ನೀಡಲಾಗಿದ್ದು, ಪೊಲೀಸರು ಅಲ್ಲಿಗೆ ತೆರಳಿ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ.

ನಕ್ಸಲ್ ನಿಗ್ರಹ ದಳದ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದು, ತನಿಖಾ ಅಧಿಕಾರಿಗಳು ಮನೆಯವರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ನಕ್ಸಲ್ ನಿಗ್ರಹ ದಳದವರು ಈ ಪ್ರದೇಶಗಳ ಸಮೀಪದಲ್ಲಿ ಕೂಂಬಿಂಗ್ ನಡೆಸುತ್ತಿದ್ದಾರೆ.

ಇದನ್ನೂ ಓದಿ:ದಕ್ಷಿಣ ಕನ್ನಡ-ಕೊಡಗು ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ: ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್

ಕೆಲವು ದಿನಗಳ ಹಿಂದಷ್ಟೇ ಕೂಜಿಮಲೆ ಪ್ರದೇಶದಲ್ಲಿ‌ ನಕ್ಸಲರ ಚಟುವಟಿಕೆ ಕಂಡು ಬಂದಿತ್ತು. ಅಂತೆಯೇ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇವರು ಕೂಡಾ ನಕ್ಸಲರೇ ಆಗಿರಬಹುದು ಎಂದು ಶಂಕಿಸಲಾಗಿದೆ. 2012ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಂತರ, 2018ರ ಫೆಬ್ರವರಿ ತಿಂಗಳಲ್ಲಿ ಇದೇ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲೂ ನಕ್ಸಲರು ಕಾಣಿಸಿಕೊಂಡಿದ್ದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರತೀ ಬಾರಿಯೂ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಗಡಿ ಪ್ರದೇಶದಲ್ಲಿ ನಕ್ಸಲರ ಚಲನವಲನಗಳು ಗೋಚರಿಸುತ್ತವೆ.

ABOUT THE AUTHOR

...view details