ಶಿರಸಿ:''ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಇತ್ತೀಚಿಗೆ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಿವಾದಿತ ಹೇಳಿಕೆ ನೀಡಿರುವ ಆರೋಪದಡಿ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಮುಂಡಗೋಡು ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ.
ಫೆ.23ರಂದು ನಡೆದ ಸಭೆಯಲ್ಲಿ ಮಾತನಾಡಿದ್ದ ಹೆಗಡೆ, ''ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಿದ್ದರಾಮುಲ್ಲಾಖಾನ್'' ಎಂದು ವ್ಯಂಗ್ಯವಾಡಿದ್ದರು. ಈ ಕುರಿತು ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಗುತಿದ್ದಂತೆ ವಿಡಿಯೋ ತುಣುಕಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ: "ಸಿದ್ದರಾಮುಲ್ಲಾಖಾನ್ ಅವರಿಗೆ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ. ಅಭಿವೃದ್ಧಿಗೂ ದುಡ್ಡಿಲ್ಲ ಅಂತಾರೆ. ಹಿಂದುಳಿದವರಿಗೆ ಕೊಟ್ಟ 11 ಸಾವಿರ ಕೋಟಿ ರೂ ನಾಪತ್ತೆಯಾಗಿದೆ. ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಿದ್ದರಾಮಯ್ಯ ಸರ್ಕಾರದಂತೆ ಮೋದಿ ಸರ್ಕಾರ ದಿವಾಳಿ ಆಗಿಲ್ಲ.''
''ರಾಜ್ಯವನ್ನು ಲೂಟಿ ಹೊಡೆದು ದಿವಾಳಿ ಮಾಡಿ ಓಟು ತಗೋಬೇಕು ಎಂದು ಕಾಂಗ್ರೆಸ್ನವರು ಹೊರಟಿದ್ದಾರೆ. ಇಷ್ಟು ಕೀಳುಮಟ್ಟದ ಸರ್ಕಾರವನ್ನು ನಾನೆಲ್ಲೂ ನೋಡಿಲ್ಲ. ಈ ದೇಶದಲ್ಲಿ ತೆರಿಗೆ ಕಟ್ಟುವವರು ಶೇಕಡಾ 99ರಷ್ಟು ಜನ ಹಿಂದೂಗಳು. ನಮ್ಮ ಹಾಳುಬಿದ್ದ ದೇವಸ್ಥಾನಗಳನ್ನು ಸರಿಪಡಿಸಲು ಹಣ ನೀಡುವುದಿಲ್ಲ. ನಮ್ಮ ದುಡ್ಡು ತೆಗೆದುಕೊಂಡು ಹೋಗಿ, ಮಸೀದಿಗೆ, ಚರ್ಚ್ಗೆ ಯಾಕೆ ಕೊಟ್ರಿ? ನಾವು ಕೊಟ್ಟಿರುವ ತೆರಿಗೆ ಮೇಲೆ ಸರ್ಕಾರ ನಡೆಯುತ್ತಿದೆ. ನಾವು ಹಿಂದೂಗಳ ತೆರಿಗೆ, ಹಿಂದೂಗಳ ಹಕ್ಕು ಅಂತ ಕುಳಿತುಕೊಂಡರೆ ಪರಿಸ್ಥಿತಿ ಏನಾಗುತ್ತೆ? ಆದರೆ, ನಾವು ಸಣ್ಣ ಬುದ್ಧಿ ಪ್ರದರ್ಶನ ಮಾಡುವುದಿಲ್ಲ. ಯಾರಿಗೆ ಬೇಕಾದ್ರೂ ಕೊಡಲಿ. ಹೀಗಾದ್ರೆ ಹಿಂದೂ ಸಮಾಜದ ಪರಿಸ್ಥಿತಿ ಏನು? ಯಾರೂ ಹೇಳೋರು ಕೇಳೋರು ಇಲ್ಲದ ಸಮಾಜವಾ ಇದು?" ಎಂದು ಹೇಳಿದ್ದರು.
ಇದನ್ನೂ ಓದಿ:ಪದೇ ಪದೆ ನಿಯಮ ಉಲ್ಲಂಘಿಸುವ ವಾಹನ ಸವಾರರೇ ಎಚ್ಚರ: ವಾಹನ ನಾಶಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ