ಬೆಂಗಳೂರು:ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಕುರಿತು ನಟಿ, ರಾಜಕಾರಣಿ ಸುಮಲತಾ ಅಂಬರೀಶ್ ಸುದೀರ್ಘ ಪತ್ರ ಬರೆದು, ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪತ್ರದ ಸಾರಾಂಶ ಹೀಗಿದೆ:
ನಾನು 44 ವರ್ಷಗಳಿಂದ ನಟಿಯಾಗಿ, ಕಲಾವಿದೆಯಾಗಿ ಸಾರ್ವಜನಿಕ ಜೀವನದಲ್ಲಿದ್ದೇನೆ. ಕಳೆದ 5 ವರ್ಷಗಳಿಂದ ಸಂಸದೆಯಾಗಿದ್ದೆ. ಅಲ್ಲದೇ, ನಾನು ಕಲಾವಿದೆಯಾಗಿ, ಪತ್ನಿಯಾಗಿ, ತಾಯಿಯಾಗಿ, ಸಂಸದೆಯಾಗಿ ಮತ್ತು ಒಂದು ವ್ಯಕ್ತಿಯಾಗಿ ನನ್ನ ಜೀವನದಲ್ಲಿ ಪ್ರತಿಯೊಂದು ಜವಾಬ್ದಾರಿಯನ್ನೂ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಸಮಾಜದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ, ನನ್ನ ಬಳಿ ಯಾವುದೇ ಸತ್ಯ ಅಥವಾ ಮಾಹಿತಿಯಿಲ್ಲದೆ ನಾನು ಅಸಡ್ಡೆ, ಅನಗತ್ಯ, ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಲು ಸಾಧ್ಯವಿಲ್ಲ.
ಇಂದು ನಾನು ಕೆಲವು ಸಂಗತಿಗಳನ್ನು ಸ್ಪಷ್ಟಪಡಿಸಲು, ನನ್ನ ಆಲೋಚನೆಗಳು ಮತ್ತು ನೋವನ್ನು ಹಂಚಿಕೊಳ್ಳಲು ಈ ಪೋಸ್ಟ್ ಮಾಡುತ್ತಿದ್ದೇನೆ. ಏಕೆಂದರೆ ಮಾಧ್ಯಮ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹೆಚ್ಚಿನ ಊಹಾಪೋಹಗಳನ್ನು ಪ್ರೋತ್ಸಾಹಿಸಲು ಅಥವಾ ನನ್ನ ನಿಲುವಿನ ಬಗ್ಗೆ ಅಭಿಮಾನಿಗಳಲ್ಲಿ ಯಾವುದೇ ಗೊಂದಲಗಳಿಗೆ ಎಡೆಮಾಡಿಕೊಡಲು ನಾನು ಬಯಸುವುದಿಲ್ಲ.
ಮೊದಲಿಗೆ ತಮ್ಮ ಮಗ ಮತ್ತು ಪತಿಯನ್ನು ಹೃದಯವಿದ್ರಾವಕ ರೀತಿಯಲ್ಲಿ ಕಳೆದುಕೊಂಡಿರುವ ರೇಣುಕಾಸ್ವಾಮಿ ಅವರ ಹೆತ್ತವರು ಮತ್ತು ಪತ್ನಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಈ ದುರಂತವನ್ನು ಎದುರಿಸಲು ಮತ್ತು ಆ ನೋವನ್ನು ಭರಿಸಲು ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ಕಾನೂನು ವ್ಯವಸ್ಥೆಯಿಂದ ಅವರಿಗೆ ಸಿಗಬೇಕಾದ ನ್ಯಾಯ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.
ಈ ಘಟನೆ ನನ್ನ ಹೃದಯವನ್ನು ಛಿದ್ರಗೊಳಿಸಿತು. ನಾನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಹಲವಾರು ದಿನಗಳವರೆಗೆ ಆಘಾತ ಮತ್ತು ನೋವಿನ ಸ್ಥಿತಿಯಲ್ಲಿದ್ದೆ. ನನ್ನ "ಮೌನ"ದ ಬಗ್ಗೆ ಕಾಮೆಂಟ್ ಮಾಡುತ್ತಿರುವ ಕೆಲವರು, ನನ್ನ ಮತ್ತು ದರ್ಶನ್, ಅವರ ಕುಟುಂಬ ಮತ್ತು ನಾವು ವರ್ಷಗಳಿಂದ ಹಂಚಿಕೊಂಡಿರುವ ಬಾಂಧವ್ಯದ ನಡುವಿನ ಅಗಾಧತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಸ್ಟಾರ್ ಮತ್ತು ಸೂಪರ್‌ಸ್ಪಾರ್ ಆಗುವ ಮೊದಲು ನಾನು ಅವರನ್ನು 25 ವರ್ಷಗಳಿಂದ ಬಲ್ಲೆ. ಯಾವುದೇ ಸ್ಟಾರ್‌ಡಂಗಿಂತ ಹೆಚ್ಚಾಗಿ, ಅವರು ನನ್ನ ಕುಟುಂಬದ ಸದಸ್ಯ ಮತ್ತು ಯಾವಾಗಲೂ ನನಗೆ ಮಗನಂತೆ. ಅವರು ಅಂಬರೀಶ್ ಅವರನ್ನು ಯಾವಾಗಲೂ ತಮ್ಮ ಅಪ್ಪಾಜಿ ಎಂದು ಪರಿಗಣಿಸಿದ್ದಾರೆ. ನನಗೆ ಅವರ ತಾಯಿಯ ಗೌರವ ಮತ್ತು ಸ್ಥಾನ ಮತ್ತು ಮಗನ ಪ್ರೀತಿಯನ್ನು ನೀಡಿದ್ದಾರೆ.
ಯಾವ ತಾಯಿಯೂ ತನ್ನ ಮಗುವನ್ನು ಈ ರೀತಿಯ ಪರಿಸ್ಥಿತಿಯಲ್ಲಿ ನೋಡುವುದನ್ನು ಸಹಿಸುವುದಿಲ್ಲ. ನಾನು ದರ್ಶನ್ ಅವರನ್ನು ಪ್ರೀತಿಸುವ ಹೃದಯ ಹೊಂದಿರುವ, ಅತ್ಯಂತ ಕಾಳಜಿಯುಳ್ಳ ಮತ್ತು ಉದಾರ ವ್ಯಕ್ತಿ ಎಂದು ತಿಳಿದಿದ್ದೇನೆ. ಪ್ರಾಣಿಗಳ ಬಗ್ಗೆ ಅವನ ಸಹಾನುಭೂತಿ ಮತ್ತು ಸಹಾಯ ಮಾಡುವ ಮನೋಭಾವ ಯಾವಾಗಲೂ ಅವನ ಸ್ವಭಾವದ ಭಾಗವಾಗಿದೆ. ಈ ಕೃತ್ಯವನ್ನು ಮಾಡುವ ವ್ಯಕ್ತಿತ್ವ ದರ್ಶನ್ ಅವರದ್ದಲ್ಲ ಎಂದು ನಾನು ನಂಬಿದ್ದೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಬಗ್ಗೆ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ.
ದರ್ಶನ್ ಜೊತೆಗೆ ಅವನ ಪತ್ನಿ ವಿಜಯಲಕ್ಷ್ಮಿ ಮತ್ತು ಮುಗ್ಧ ಮಗನನ್ನು ಸಾಮಾಜಿಕ ಮಾಧ್ಯಮದಲ್ಲಿ ಗುರಿಯಾಗಿಸಿಕೊಂಡಿರುವುದು ತುಂಬಾ ಅನ್ಯಾಯವಾಗಿದೆ. ಅಷ್ಟೇ ಅಲ್ಲದೆ ಇತರೆ ಆರೋಪಿಗಳ ಬಡ ಕುಟುಂಬಗಳು ಕೂಡ ಸಂಕಷ್ಟಕ್ಕೆ ಸಿಲುಕಿರುವುದು ನೋವಿನ ಸಂಗತಿ. ಸೋಷಿಯಲ್ ಮೀಡಿಯಾ ಬಳಕೆದಾರರು ಮತ್ತು ಸಾರ್ವಜನಿಕರು ಸಂತ್ರಸ್ತ ಅಥವಾ ಆರೋಪಿಯ ಕುಟುಂಬಗಳು, ಈಗಾಗಲೇ ಈ ಭಯಾನಕ ಪರಿಸ್ಥಿತಿಯನ್ನು ಎದುರಿಸುತ್ತಿರುವವರ ಮೇಲೆ ತಮ್ಮ ಕಾಮೆಂಟ್‌ಗಳು ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಪರಿಗಣಿಸಬೇಕು.