ಕೊಪ್ಪಳ:ಗಂಗಾವತಿಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು ಐತಿಹಾಸಿಕ ಕಿಷ್ಕಿಂಧಾ ಎಂಬ ನೂತನ ಜಿಲ್ಲೆ ರಚಿಸಬೇಕೆಂದು ಇಲ್ಲಿನ ಸಂಕಲ್ಪ ಪದವಿ ಮತ್ತು ಪದವಿಪೂರ್ವ ಕಾಲೇಜಿನ 1,200 ವಿದ್ಯಾರ್ಥಿಗಳು ಶನಿವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಸ್ವ ಹಸ್ತಾಕ್ಷರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಗೆ ಪತ್ರಗಳನ್ನು ಬರೆದಿದ್ದಾರೆ. ಈ ಪತ್ರಗಳನ್ನು ಅಂಬೇಡ್ಕರ್ ವೃತ್ತದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಆವರಣದಲ್ಲಿರುವ ಅಂಚೆ ಪೆಟ್ಟಿಗೆಯಲ್ಲಿ ಹಾಕಿದರು.
ಕೇಂದ್ರ ಬಸ್ ನಿಲ್ದಾಣದ ಹಿಂದೆ ಇರುವ ವಿಜಯನಗರ ಕಾಲನಿಯ ಸಂಕಲ್ಪ ಕಾಲೇಜಿನ ಆವರಣದಿಂದ ಜಾಥಾ ನಡೆಸಿದ ವಿದ್ಯಾರ್ಥಿಗಳು ಶ್ರೀಕೃಷ್ಣದೇವರಾಯ ವೃತ್ತ, ನೀಲಕಂಠೇಶ್ವರ ವೃತ್ತದ ಮೂಲಕ ಪ್ರಧಾನ ಅಂಚೆ ಕಚೇರಿಗೆ ಬಂದು ಬಳಿಕ ಪತ್ರಗಳನ್ನು ಪೋಸ್ಟ್ ಮಾಡಿದರು. ಅಂಚೆ ಕಚೇರಿ ಸಿಬ್ಬಂದಿ ಪ್ಲಾಸ್ಟಿಕ್ ಚೀಲದಲ್ಲಿ ಪತ್ರಗಳನ್ನು ಹಾಕಿಸಿಕೊಂಡು ವಿಧಾನಸೌಧಕ್ಕೆ ತಲುಪಿಸುವ ಭರವಸೆ ನೀಡಿದರು.