ಬೆಂಗಳೂರು: ಸಂವಿಧಾನದ ಗೌರವಯುತ ಸ್ಥಾನದಲ್ಲಿರುವ ರಾಜ್ಯಪಾಲರನ್ನು ಅತ್ಯಂತ ಅವಮಾನಿಸುವ ರೀತಿಯಲ್ಲಿ ವರ್ತಿಸಿದ್ದನ್ನು ಇಡೀ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರೂ ಖಂಡಿಸುತ್ತಿದ್ದಾರೆ. ಇದರ ವಿರುದ್ಧ ನಾಳೆ ರಾಜ್ಯಾದ್ಯಂತ ತೀವ್ರತರ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ-ಪ್ರತಿಭಟನೆಯನ್ನು ಸಂವಿಧಾನದ ಚೌಕಟ್ಟಿನಲ್ಲೇ ನಾವು ಕೈಗೊಳ್ಳುತ್ತೇವೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಈ ಹೋರಾಟದ ಎಲ್ಲ ಕ್ಷಣದ ಬೆಳವಣಿಗೆಗಳ ಸೂಚನೆ ಕೊಟ್ಟಿದ್ದಾರೆ. ಅವರೂ ಹೋರಾಟದಲ್ಲಿ ಇರುತ್ತಾರೆ. ಡಿ.ವಿ.ಸದಾನಂದಗೌಡರು ತುಮಕೂರಿನಲ್ಲಿ, ಬಸವರಾಜ ಬೊಮ್ಮಾಯಿ - ದಾವಣಗೆರೆ, ಗೋವಿಂದ ಕಾರಜೋಳ - ಚಿತ್ರದುರ್ಗ, ಆರ್.ಅಶೋಕ್ - ಮಂಡ್ಯ, ಡಾ.ಸಿ.ಎನ್.ಅಶ್ವತ್ಥನಾರಾಯಣ್ ಮತ್ತು ಛಲವಾದಿ ನಾರಾಯಣಸ್ವಾಮಿ - ಬೆಂಗಳೂರು, ಬಿ.ಶ್ರೀರಾಮುಲು - ಬಳ್ಳಾರಿ, ಸಿ.ಟಿ.ರವಿ - ಚಿಕ್ಕಮಗಳೂರು, ನಳಿನ್‍ಕುಮಾರ್ ಕಟೀಲ್ - ಮಂಗಳೂರಿನಲ್ಲಿ ಭಾಗವಹಿಸುತ್ತಾರೆ. ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು ಆಯಾ ಜಿಲ್ಲೆಗಳಲ್ಲಿ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.
ಆರೋಪಿತ ಮುಖ್ಯಮಂತ್ರಿಯನ್ನು ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಹೇಗೆ ಪ್ರಶ್ನಿಸಿ ತನಿಖೆ ಮಾಡಲು ಸಾಧ್ಯ ಎಂದು ಪಿ.ರಾಜೀವ್ ಪ್ರಶ್ನಿಸಿದರು. ಒಬ್ಬ ತನಿಖಾಧಿಕಾರಿ ಮುಖ್ಯಮಂತ್ರಿಯನ್ನು ಹೇಗೆ ತನಿಖೆ ಮಾಡಲು ಸಾಧ್ಯವಿದೆ ಎಂದು ಕೇಳಿದರು. ಬೈರತಿ ಸುರೇಶ್ ಅವರೇ ಸಚಿವರಾಗಿ ಮುಂದುವರಿದರೆ ಅವರನ್ನು ತನಿಖಾಧಿಕಾರಿ ಪ್ರಶ್ನೆ ಕೇಳಲು ಸಾಧ್ಯವಿದೆಯೇ? ವೈಟ್ನರ್ ಖರೀದಿ, ವೈಟ್ನರ್ ಹಚ್ಚುವಾಗ ಫ್ಲೈಟಿನಲ್ಲಿ ಕುಳಿತೇ ಹಚ್ಚಿದ್ದೀರಾ? ಕಾರ್ಯಾಲಯಕ್ಕೆ ಬಂದು ಹಚ್ಚಿದ್ದೀರಾ? ಈ ವೈಟ್ನರ್ ತರಿಸಲು ಯಾರ್ಯಾರನ್ನು ಬಳಸಿಕೊಂಡಿದ್ದೀರಿ?- ಇಂಥ ಪ್ರಶ್ನೆಗಳನ್ನು ಕೇಳಲು ಆಗುವುದಿಲ್ಲ ಎಂದು ಟಾಂಗ್ ಕೊಟ್ಟರು.