ದೊಡ್ಡಬಳ್ಳಾಪುರ:ಮಹಾಶಿವರಾತ್ರಿ ಪ್ರಯುಕ್ತ ಮಾರ್ಚ್ 8ರಂದು ಘಾಟಿ ಸುಬ್ರಮಣ್ಯ ಕ್ಷೇತ್ರದ ಸಮೀಪ ಹಳ್ಳಿಕಾರ್ ರಾಸುಗಳ ಫ್ಯಾಷನ್ ಶೋ ಆಯೋಜನೆ ಮಾಡಲಾಗಿದೆ. ದೇಶಿ ರಾಸುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗು ಯುವ ಪೀಳಿಗೆಯ ಯುವಕರನ್ನು ಹಸುಗಳ ಪಾಲನೆ-ಪೋಷಣೆಯಲ್ಲಿ ತೊಡಗಿಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಈ ಕಾರ್ಯಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕದ ಯಾವುದೇ ಭಾಗದ ರೈತರು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
ಈ ಬಗ್ಗೆ ಶನಿವಾರ ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯ ಚೌಡೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆಯಿಂದ ಪತ್ರಿಕಾಗೋಷ್ಠಿ ನಡೆಯಿತು.
ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಅಂಬರೀಶ್ ಮಾತನಾಡಿ, "ಮಹಾಶಿವರಾತ್ರಿ ಅಂಗವಾಗಿ ಹಳ್ಳಿಕಾರ್ ಹಸುಗಳ ಫ್ಯಾಶನ್ ಶೋ ಪ್ರಸ್ತುತಪಡಿಸಲು ನಾವು ಉತ್ಸುಕರಾಗಿದ್ದೇವೆ. ಈ ಕಾರ್ಯಕ್ರಮದ ಮೂಲಕ ಹಳ್ಳಿಕಾರ್ ತಳಿಯ ಸೌಂದರ್ಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪ್ರದರ್ಶಿಸುವ ಗುರಿ ಹೊಂದಿದ್ದೇವೆ. ಸ್ಥಳೀಯ ತಳಿಗಳನ್ನು ಸಂರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ" ಎಂದರು.