ಹಾವೇರಿ:ಉತ್ತರ ಕರ್ನಾಟಕದ ಪ್ರಮುಖ ಜಾನಪದ ಸೊಗಡಿನ ಕ್ರೀಡೆಯೆಂದರೆ ದನಬೆದರಿಸುವ ಸ್ಪರ್ಧೆ. ಉಳಿದಂತೆ ಖಾಲಿ ಗಾಡಾ ಓಡಿಸುವ ಸ್ಪರ್ಧೆ ಮತ್ತು ಟಗರು ಕಾಳಗವಿದ್ದರೂ ಸಹ ಹೆಚ್ಚಿನ ಮಹತ್ವ ನೀಡುವುದು ದನಬೆದರಿಸುವ ಸ್ಪರ್ಧೆಗೆ. ಇದಕ್ಕೆ ಸ್ಥಳೀಯವಾಗಿ ಹೋರಿ ಹಬ್ಬ, ಕೊಬ್ಬರಿ ಹೋರಿ ಹಬ್ಬ ಅಂತಲೂ ಕರೆಯುತ್ತಾರೆ. ಈ ರೀತಿ ಕೊಬ್ಬರಿ ಹೋರಿ ಸಾಕುವುದು ಹಾವೇರಿ ಜಿಲ್ಲೆಯ ರೈತರಿಗೆ ಪ್ರತಿಷ್ಠೆಯ ವಿಷಯ.
ಈ ತರದ ಹೋರಿಗಳನ್ನು ಸಾಕಲು ಹೆಮ್ಮೆಪಡುವ ರೈತರು ಅವುಗಳಿಗೆ ಜಾನಪದ ಸೊಗಡಿನ ಹೆಸರು, ಸಿನಿಮಾ ನಟರ ಹೆಸರು, ಸಿನಿಮಾದ ಹೆಸರು ಇಟ್ಟು ಕರೆಯುವುದು ಇತ್ತೀಚಿನ ಫ್ಯಾಷನ್. ಇನ್ನು ಇದರಲ್ಲಿ ಎರಡು ವಿಭಾಗ ಮಾಡುವ ರೈತರು ಗಗ್ಗರಿ ಹೋರಿ ಮತ್ತು ಪೀಪಿ ಹೋರಿ ಎಂದು ವಿಭಾಗ ಮಾಡುತ್ತಾರೆ. ಈ ರೀತಿಯ ಸ್ಪರ್ಧೆಗಳಲ್ಲಿ ಹೋರಿಗಳನ್ನ ಪ್ರತ್ಯೇಕವಾಗಿ ಸಿಂಗರಿಸಲಾಗುತ್ತದೆ.
ಗಗ್ಗರಿ ಹೋರಿಗೆ ಮತ್ತು ಪೀಪಿ ಹೋರಿಗೆ ಅದರದ್ದೇ ಸ್ಟೈಲ್‌ಗಳಿರುತ್ತವೆ. ಇಂತಹ ಕೊಬ್ಬರಿ ಹೋರಿ ಸಾಕಿದ ರೈತರು ವರ್ಷಪೂರ್ತಿ ಜಮೀನಿನಲ್ಲಿ ಹೋರಿಗಳನ್ನು ಕೃಷಿ ಚಟುವಟಿಕೆಗಳಿಗೆ ಬಳಸುತ್ತಾರೆ. ದೀಪಾವಳಿ ನಂತರ ನಡೆಯುವ ಹೋರಿ ಸ್ಪರ್ಧೆಗಳಲ್ಲಿ ಹೋರಿಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡು ರೈತರು ಸಂಭ್ರಮಿಸುತ್ತಾರೆ. ಇನ್ನೂ ಕೆಲ ರೈತರು ಹೋರಿ ಹಬ್ಬಕ್ಕಾಗಿಯೇ ಎತ್ತುಗಳನ್ನು ಸಾಕುತ್ತಾರೆ. ಇವುಗಳನ್ನು ಕೃಷಿ ಚಟುವಟಿಕೆಗೆ ಬಳಸುವುದಿಲ್ಲ.
ಅವುಗಳಿಗೆ ಅದರದ್ದೇ ಆದ ತಾಲೀಮುಗಳಿರುತ್ತವೆ. ಹೋರಿ ಹಬ್ಬ ಸಮೀಪ ಇದ್ದಾಗ ಹೋರಿಗಳನ್ನು ಮುಂಜಾನೆ ನಾಲ್ಕು ಗಂಟೆಗೆ ಕರೆದುಕೊಂಡು ವಾಕ್ ಮಾಡಿಸಲಾಗುತ್ತದೆ. ನಂತರ ಬೈಕ್ ತೆಗೆದುಕೊಂಡು ಹೋರಿ ಓಡಿಸಲಾಗುತ್ತದೆ. ನಂತರ 10 ರಿಂದ 20 ನಿಮಿಷ ಕೆರೆಯ ನೀರಿನಲ್ಲಿ ಈಜು ಮಾಡಿಸಲಾಗುತ್ತದೆ. ಇದರಿಂದ ಹೋರಿಗಳು ದಮ್ಮು ಕಳೆಯುತ್ತವೆ. ಹೆಚ್ಚು ಹೊತ್ತು ಓಡಿಸಿದರೂ ಎತ್ತಿಗೆ ಸುಸ್ತಾಗುವುದಿಲ್ಲ ಎನ್ನುತ್ತಾರೆ ರೈತರು.
ಇನ್ನು ಈ ರೀತಿಯ ಕೊಬ್ಬರಿ ಹೋರಿ ಓಡಿಸುವ ಅಖಾಡಗಳನ್ನು ನಿರ್ಮಿಸುವುದು ಸಹ ಒಂದು ಕಲೆ. ಇದನ್ನು ಅರಿತಿರುವ ಹಿರೇಕೆರೂರು ತಾಲೂಕಿನ ಹಂಸಭಾವಿ ಗ್ರಾಮಸ್ಥರು ಗ್ರಾಮದ ಪಕ್ಕದಲ್ಲಿರುವ ಕೆರೆಯ ಅಂಗಳದಲ್ಲಿ ಸುಮಾರು ಎಂಟು ದಿನಗಳವರೆಗೆ ವೈಜ್ಞಾನಿಕವಾಗಿ ಅಖಾಡ ಸಿದ್ಧಪಡಿಸಿದ್ದಾರೆ.