ಮೈಸೂರು:ಸಂಸದವಿ. ಶ್ರೀನಿವಾಸ ಪ್ರಸಾದ್ ಅವರ ಅಂತ್ಯಕ್ರಿಯೆ ಬೌದ್ಧ ಧರ್ಮದ ವಿಧಿ ವಿಧಾನದಂತೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಹೆಚ್.ಡಿ. ಕೋಟೆ ರಸ್ತೆಯಲ್ಲಿರುವ ಸಿಲ್ಕ್ ಫ್ಯಾಕ್ಟರಿ ಬಳಿಯ ಡಾ.ಅಂಬೇಡ್ಕರ್ ಅವರ ಟ್ರಸ್ಟ್ ಆವರಣದಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ಪ್ರಸಾದ್ ಅವರ ಪುತ್ರಿ ಪ್ರತಿಮಾ ಪ್ರಸಾದ್ ತಂದೆಯ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಭಾನುವಾರ ತಡರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಂಸದ ಶ್ರೀನಿವಾಸ ಪ್ರಸಾದ್ ನಿಧನರಾದರು. ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿಗೆ ತರಲಾಗಿದ್ದು. ಇಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಭೀಮ ಸದನದಲ್ಲಿ ಅಂತಿಮ ದರ್ಶನ:ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಮನೆ ಭೀಮ ಸದನದಲ್ಲಿ ಸೋಮವಾರ ಬೆಳಗ್ಗೆ 8.30 ರಿಂದ 1 ಗಂಟೆಯವರೆಗೆ ಕುಟುಂಬಸ್ಥರ ಹಾಗೂ ಕೆಲವು ಪ್ರಮುಖ ನಾಯಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ 1 ಗಂಟೆಯಿಂದ ಮಂಗಳವಾರ 1 ಗಂಟೆಯವರೆಗೆ ಅಶೋಕ್ ಪುರಂನಲ್ಲಿರುವ NTM ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಹೆಚ್ಡಿ ಕೋಟೆ ರಸ್ತೆಯಲ್ಲಿರುವ ಸಿಲ್ಕ್ ಫ್ಯಾಕ್ಟರಿ ಬಳಿಯ ಡಾ.ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದೆ. ಬೌದ್ಧ ಧರ್ಮದ ವಿಧಿ ವಿಧಾನದಂತೆ ಅಂತ್ಯಕ್ರಿಯೆ ನಡೆಸಲಾಗುವುದು. ನಮ್ಮ ತಂದೆ ಶ್ರೀನಿವಾಸ ಪ್ರಸಾದ್ ಬೌದ್ಧಧರ್ಮದ ಅನುಯಾಯಿ ಆಗಿದ್ದರು ಎಂದು ಅಂತ್ಯಕ್ರಿಯೆ ವಿಧಿ ವಿಧಾನದ ಬಗ್ಗೆ ಮಗಳು ಪ್ರತಿಮಾ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಗಣ್ಯರಿಂದ ಅಂತಿಮ ದರ್ಶನ:ಇಂದು ಅವರ ಜಯಲಕ್ಷ್ಮಿಪುರಂ ನಿವಾಸಕ್ಕೆ ಆಗಮಿಸಿ ಅವರ ಅಂತಿಮ ದರ್ಶನವನ್ನು ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ ಟಿ ದೇವೇಗೌಡ, ಸುತ್ತೂರು ಶ್ರೀಗಳು, ಸಾಹಿತಿ ದೇವನೂರು ಮಹಾದೇವ, ಎಂಎಲ್ಸಿ ಹೆಚ್. ವಿಶ್ವನಾಥ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದರು.