ಮಂಗಳೂರು:ಐದು ವರ್ಷಗಳ ಹಿಂದೆ ನಗರದಲ್ಲಿ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29 ತುಂಡುಗಳನ್ನಾಗಿ ಬೇರ್ಪಡಿಸಿ ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದ ಪ್ರಕರಣದಲ್ಲಿ ದಂಪತಿ ಸಹಿತ ಮೂವರ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಲಾಗಿದೆ.
ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಟ್ಸನ್(40), ವಿಕ್ಟೋರಿಯಾ ಮಥಾಯಿಸ್ (47) ಹಾಗೂ ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಈ ಪೈಕಿ ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲೇ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ.
ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ(42) ಪೊಳಲಿ ಇಲೆಕ್ಟ್ರಾನಿಕ್ಸ್ ಅಂಗಡಿಯನ್ನು ಇಟ್ಟುಕೊಂಡಿದ್ದರು. ಜೊತೆಗೆ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಚಿಟ್ ಫಂಡ್‌ನಲ್ಲಿ ಜೋನಸ್ ಎರಡು ಸದಸ್ಯತ್ವ ಹೊಂದಿದ್ದರು. ಆದರೆ ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಮಾಸಿಕ ಕಂತುಗಳ ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು.
ಶ್ರೀಮತಿ ಶೆಟ್ಟಿ 2019ರ ಮೇ 11ರಂದು ಬೆಳಗ್ಗೆ 9:15ಕ್ಕೆ ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್‌ನ ಮನೆಗೆ ತೆರಳಿದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಜೋನಸ್ ಮರದ ತುಂಡಿನಿಂದ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯನ್ನು ಜೋನಸ್ ಮತ್ತು ಅವರ ಪತ್ನಿ ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಹರಿತವಾದ ಕತ್ತಿಯಿಂದ ಕುತ್ತಿಗೆಯನ್ನು ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ರುಂಡ, ಕೈ, ಕಾಲು ಹಾಗೂ ಇತರ ಭಾಗಗಳನ್ನು 29 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು. ಶ್ರೀಮತಿ ಶೆಟ್ಟಿಯ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿಯನ್ನು ಆರೋಪಿಗಳು ಮನೆಯಲ್ಲಿ ಸುಟ್ಟು ಹಾಕಿದ್ದರು.