ರಾಮನಗರ:ಇಲ್ಲಿ ಭಕ್ತಾದಿಗಳ ಯಾವುದೇ ಹರಕೆಯಿದ್ದರೂ ಈಡೇರುತ್ತವಂತೆ. ಪ್ರಾಕೃತಿಕವಾಗಿ ಸುಂದರ ನೈಸರ್ಗಿಕ ತಾಣವೆಂದೇ ಕರೆಸಿಕೊಳ್ಳುವ ಈ ಸ್ಥಳ ಶ್ರೀರಾಮ ವನವಾಸ ಕೈಗೊಂಡಾಗ ಭೇಟಿ ನೀಡಿದ್ದ ಪುಣ್ಯ ಸ್ಥಳ. ಬೆಂಗಳೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ರಾಮನಗರದಲ್ಲಿ ಅಂಥದ್ದೊಂದು ಪುರಾಣ ಪ್ರಸಿದ್ಧ ತಾಣವಿದೆ.
ಈ ಕ್ಷೇತ್ರ ರಾಮನಗರದ ಶ್ರೀರಾಮದೇವರ ಬೆಟ್ಟದ ಮೇಲಿದೆ. ರಾಮ ವನವಾಸದ ಸಂದರ್ಭದಲ್ಲಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಇಲ್ಲಿ 5 ರಿಂದ 6 ವರ್ಷಗಳ ಕಾಲ ತಂಗಿದ್ದನು ಎಂಬುದು ಪುರಾಣಗಳಿಂದ ದೊರೆಯುವ ಮಾಹಿತಿ. ತನ್ನ ತಂದೆಯ ನಿತ್ಯಪೂಜೆಗೆ ಶ್ರೀರಾಮ ಇಲ್ಲಿ ತೀರ್ಥ ಮತ್ತು ಶ್ರೀರಾಮೇಶ್ವರ ದೇವಾಲಯಗಳನ್ನು ನಿರ್ಮಿಸಿದ್ದ ಎಂದೇ ಹೇಳಲಾಗುತ್ತದೆ.
ಶ್ರೀರಾಮ ತೀರ್ಥಕ್ಕೆ ಇನ್ನೊಂದು ಹೆಸರು ಶ್ರೀಧನುಷ್ ಕೋಟಿ ತೀರ್ಥ. ಅಂದರೆ ಈ ತೀರ್ಥದಲ್ಲಿ ಒಂದು ಕೋಟಿ ಪವಿತ್ರ ನದಿಯ ಜಲ ಮಿಶ್ರಿತವಾಗಿದೆ ಎಂದರ್ಥ. ಗಂಗಾ, ಯಮುನಾ, ಸರಸ್ವತಿ, ಕುಮಾರಧಾರಾ, ನೇತ್ರಾವತಿ ನದಿಗಳು ಇಲ್ಲಿ ಬಂದು ಮುಟ್ಟಿವೆ ಎಂಬುದು ಭಕ್ತರ ನಂಬಿಕೆ.
ಶ್ರೀರಾಮ ತೀರ್ಥ ಮತ್ತು ಶ್ರೀರಾಮೇಶ್ವರ ದೇವಸ್ಥಾನಗಳು ಇಂದಿಗೂ ಕೂಡ ಸುಸ್ಥಿತಿಯಲ್ಲಿವೆ. ಶ್ರೀರಾಮ ಈ ಕ್ಷೇತ್ರದಲ್ಲಿ ವಾಸವಿದ್ದಾಗ ಕಾಗೆಯ ರೂಪದಲ್ಲಿದ್ದ ಕಾಕಾಸುರ ಎಂಬ ಅಸುರ, ಸೀತಾಮಾತೆಯ ಶರೀರದ ಮಾಂಸ ತಿನ್ನಲು ದಾಳಿ ಮಾಡುತ್ತಾನೆ. ಶ್ರೀರಾಮ ದರ್ಬೆಯನ್ನು ಮಂತ್ರ ಶಕ್ತಿಯಿಂದ ಬಾಣವಾಗಿ ಮಾಡಿ ಕಾಕಾಸುರನ ಸಂಹಾರಕ್ಕೆ ಬಿಡುತ್ತಾರೆ. ಆದರೆ ಯಾವ ದೇವತೆಯೂ ಕೂಡ ಕಾಕಾಸುರನನ್ನು ರಕ್ಷಿಸುವುದಿಲ್ಲ. ಕೊನೆಗೆ ಈ ಕ್ಷೇತ್ರಕ್ಕೆ ಮರಳಿ ಶ್ರೀರಾಮನಿಗೆ ಶರಣಾಗತನಾಗುತ್ತಾನೆ. ಆಗ ಅವನ ಪ್ರಾಣ ಉಳಿಯುತ್ತದೆ. ಆದರೆ ಬಾಣದ ದಾಳಿಯಿಂದ ಕಾಕಾಸುರನ ಒಂದು ಕಣ್ಣಿಗೆ ಹಾನಿಯಾಗುತ್ತದೆ. ಈ ಕ್ಷೇತ್ರದಲ್ಲಿ ಜಟಾಯು ಕೂಡ ವಾಸವಿದ್ದ ಎಂದು ತಿಳಿದು ಬರುತ್ತದೆ. ಹೀಗಾಗಿಯೇ ಇಲ್ಲಿ ಜಟಾಯು ಜಾತಿಯ ಪಕ್ಷಿ ಸಂಕುಲವಾದ ರಣಹದ್ದು ಈಗಲೂ ಕಂಡುಬರುತ್ತದೆ.