ಹುಬ್ಬಳ್ಳಿ:"ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು. ಜೈನ ಧರ್ಮ ಮೂರು ವಿಚಾರಗಳನ್ನು ಪ್ರತಿಬಿಂಬಿಸುತ್ತದೆ. ನಂಬಿಕೆ, ಜ್ಞಾನ, ಆಧ್ಯಾತ್ಮ ಪ್ರತಿರೂಪ ಜೈನ ಧರ್ಮ ಸುಮೇರು ಪರ್ವತ ಧಾರ್ಮಿಕತೆಯ ಮೇರು ಪರ್ವತವಾಗಿದೆ" ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
"ಹುಬ್ಬಳ್ಳಿ ವರೂರಿನಲ್ಲಿ ಗುರುವಾರ ನಡೆದ ವಿಶ್ವದ ಅತೀ ಎತ್ತರದ 405 ಅಡಿ ಎತ್ತರದ ಸುಮೇರು ಪರ್ವತ ಜಿನ ಬಿಂಬಗಳ ಪಂಚ ಕಲ್ಯಾಣಕ ಪ್ರತಿಷ್ಠಾ ಮಹಾ ಮಹೋತ್ಸವದಲ್ಲಿ ಮಾತನಾಡಿದ ಅವರು, ಸದ್ಯ ವಿಶ್ವ ಶಾಂತಿಯ ಅಗತ್ಯವಿದೆ. ಜೈನ ಧರ್ಮದ ಮಾನವೀಯ ತತ್ವಗಳನ್ನು ಅಳವಡಿಕೊಳ್ಳಬೇಕು" ಎಂದರು.
ಉಪರಾಷ್ಟ್ರಪತಿ ಜಗದೀಪ್ ಧನಕರ್ (ETV Bharat) "ಮಠ- ಮಂದಿರ ಕೇವಲ ಧಾರ್ಮಿಕ ಕೇಂದ್ರಗಳಲ್ಲ. ಮಠ - ಮಂದಿರಗಳು ಸಾಮಾಜಿಕ ಬದಲಾವಣೆಗೂ ಕಾರಣವಾದ ಕೇಂದ್ರಗಳು. ಸಂಘರ್ಷಗಳ ಕಾರಣದಿಂದ ಜಾಗತಿಕ ಬಿಕ್ಕಟ್ಟುಗಳು ಹೆಚ್ಚಿವೆ. ಮಾತುಕತೆಗೆ ಮಾನ್ಯತೆ ಸಿಗುತ್ತಿಲ್ಲ. ಮಾತಿಗೆ ಬೆಲೆ ಕೊಡುವ ಕೆಲಸ ಆಗಬೇಕಿದೆ. ಶಾಂತಿ ಮಂತ್ರ ಜಪಿಸಬೇಕಿದೆ. ಭಾರತ ಜಾಗತಿಕ ಮಟ್ಟದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ವಸುದೇವ ಕುಟುಂಬಕಂ ಪರಿಕಲ್ಪನೆ ಬರಬೇಕಿದೆ. ನಿಜವಾದ ವಿಕಾಸವಾದಲ್ಲಿ ಭಾರತ ವಿಶ್ವಗುರು ಆಗುತ್ತದೆ" ಎಂದರು.
ಸುಮೇರು ಪರ್ವತ ಜಿನ ಬಿಂಬಗಳ ಪಂಚ ಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ (ETV Bharat) "ನಮ್ಮ ಸಿರಿವಂತ ಸಂಸ್ಕೃತಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಾನವೀಯ ಮೌಲ್ಯಗಳು ಶಾಂತಿಗೆ ನಾಂದಿ ಹಾಡುತ್ತೆ. ನಮ್ಮ ನಾಗರೀಕತೆಗೆ 5 ಸಾವಿರ ವರ್ಷಗಳ ಇತಿಹಾಸವಿದೆ. ಅತ್ಯುನ್ನತ ಆಧ್ಯಾತ್ಮಿಕ ಇತಿಹಾಸವಿದೆ. ಭಾರತದ ಸಂಪ್ರದಾಯದ ಉಳಿವಿನ ಅಗತ್ಯವಿದೆ. ಗುಣಧರನಂದಿ ಮಾರ್ಗದರ್ಶನದಲ್ಲಿ ವರೂರು ಕ್ಷೇತ್ರ ಬೆಳೆದಿದೆ. ಸಮಾನತೆ, ಸಹಬಾಳ್ವೆಗೆ ಇಂತಹ ಕ್ಷೇತ್ರಗಳು ವೇದಿಕೆಗಳಾಗಿವೆ. ಈ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇಂತಹ ಕಾರ್ಯಕ್ರಮಕ್ಕೆ ಬರಲು ಕಾರಣರಾದ ಪ್ರಹ್ಲಾದ್ ಜೋಶಿ ಅವರಿಗೆ ಧನ್ಯವಾದ" ಎಂದರು.
ಇದನ್ನೂ ಓದಿ:ದಕ್ಷಿಣ ಕಾಶಿಯಲ್ಲಿ ನಡೆದ ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ; ಇದರ ಐತಿಹಾಸಿಕ ಹಿನ್ನೆಲೆ ಹೀಗಿದೆ!