ಬೆಂಗಳೂರು:ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಸೇರಿ ರೌಡಿಗಳಿಗೆ ವಿಶೇಷ ಆತಿಥ್ಯ ಕಲ್ಪಿಸಿದ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಪ್ರಕರಣ ತನಿಖೆ ಕುರಿತಂತೆ ಇಂದು ಮಧ್ಯಾಹ್ನ ನಂತರ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆ ಕುರಿತು ಮಾಹಿತಿ ಪಡೆಯಲಿದ್ದಾರೆ.
ಕರ್ತವ್ಯಲೋಪ ಹಾಗೂ ನಿರ್ಲಕ್ಷ್ಯ ಹಿನ್ನೆಲೆ ಅಧೀಕ್ಷಕ ಹಾಗೂ ಸೂಪರಿಡೆಂಟೆಂಟ್ ಸೇರಿದಂತೆ 9 ಮಂದಿ ಜೈಲು ಸಿಬ್ಬಂದಿಯನ್ನ ಅಮಾನತುಗೊಳಿಸಲಾಗಿದೆ. ದರ್ಶನ್ ಕುಳಿತುಕೊಂಡಿರುವ ಫೋಟೊ ತೆಗೆದ ವಿಚಾರಣಾಧೀನ ಕೈದಿ ಹಾಗೂ ಸೆಲ್ನಲ್ಲಿ ದರ್ಶನ್ ಜೊತೆ ಕುಳಿತಿರುವ ಮತ್ತೊಬ್ಬ ಕೈದಿ ಮೊಬೈಲ್ ಬಳಸಿರುವುದು ಬೆಳಕಿಗೆ ಬಂದಿದೆ. ಕೆಲ ಸಂದರ್ಭಗಳನ್ನು ಹೊರತುಪಡಿಸಿ ಅಧೀಕ್ಷಕರಿಗೂ ಮೊಬೈಲ್ ಬಳಕೆ ನಿಷಿದ್ಧ. ಆದಾಗ್ಯೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಐಎಸ್ಎಫ್) ಸಿಬ್ಬಂದಿಯ ಕಣ್ತಪ್ಪಿಸಿ ಮೊಬೈಲ್ ಬಳಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ದರ್ಶನ್ ಸೇರಿದಂತೆ ಇನ್ನಿತರ ಆರೋಪಿಗಳು ಮೊಬೈಲ್ ಬಳಸುತ್ತಿರುವುದು ಭದ್ರತಾ ಸಿಬ್ಬಂದಿಗೆ ಗಮನಕ್ಕೆ ಬಂದಿತ್ತಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೈಲಿನಲ್ಲಿ ಭದ್ರತಾ ಜವಾಬ್ದಾರಿ ಸಂಪೂರ್ಣವಾಗಿ ಕೆಐಎಸ್ಎಫ್ ಇಲಾಖೆ ಮೇಲಿರಲಿದೆ. ಕೇಂದ್ರ ಕಾರಾಗೃಹ ಭದ್ರತೆಗಗಾಗಿ ಓರ್ವ ಅಸಿಸ್ಟೆಂಟ್ ಕಮಾಂಡೆಂಟ್ ಇಬ್ಬರು ಇನ್ಸ್ಪೆಕ್ಟರ್ಗಳು ಸೇರಿ 100ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಐಎಸ್ಎಫ್ ಇಬ್ಬರು ಇನ್ಸ್ಪೆಕ್ಟರ್ಗಳು ಕಳೆದ ಆರೇಳು ವರ್ಷದಿಂದ ಇದೇ ಜೈಲಿನ ಭದ್ರತಾ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಜೈಲಿನ ಹೊರಭಾಗದಲ್ಲಿರುವ ಚೆಕ್ ಪಾಯಿಂಟ್, ಜೈಲಿನ ಮುಖ್ಯ ಪ್ರವೇಶದ್ವಾರ ಸೇರಿದಂತೆ ಜೈಲಿನ ಸುತ್ತಮತ್ತಲಿನ ವಾಚ್ ಟವರ್ನಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಾರೆ. ಜೈಲಿಗೆ ಎಂಟ್ರಿಯಾಗುವ ದಿನಸಿ ಪದಾರ್ಥಗಳಿಂದ ಹಿಡಿದು ಎಲ್ಲಾ ವಸ್ತುಗಳನ್ನ ಈ ಅಧಿಕಾರಿಗಳು ತಪಾಸಣೆ ಮಾಡುತ್ತಾರೆ. ಅಲ್ಲದೆ ಅಲ್ಲಿನ ಮುಖ್ಯ ಅಧೀಕ್ಷರು ಸೇರಿದಂತೆ ಎಲ್ಲಾ ಅಧಿಕಾರಿ ಸಿಬ್ಬಂದಿಯನ್ನ ಈ ಅಧಿಕಾರಿಗಳು ಎಂಟ್ರಿ ಮತ್ತು ಎಗ್ಸಿಟ್ನಲ್ಲಿ ತಪಾಸಣೆ ಮಾಡುತ್ತಾರೆ. ಸದ್ಯ ಜೈಲು ಅಧಿಕಾರಿಗಳ ವಿಚಾರಣೆ ಮಾಡುವುದಕ್ಕೆ ಮುನ್ನ ಈ ಅಧಿಕಾರಿಗಳ ವಿಚಾರಣೆ ಮಾಡಲು ಮುಂದಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಿಸುವ ಬಗ್ಗೆ ಪೊಲೀಸ್ ಇಲಾಖೆ ತೀರ್ಮಾನಿಸಲಿದೆ: ಸಿಎಂ - Darshan Jail Issue