ಖಗೋಳಶಾಸ್ತ್ರಜ್ಞ ರಾಮ್ ಮೋಹನ್ ಬೆಂಗಳೂರು: ನಗರದ ನೆಹರು ತಾರಾಲಯದಲ್ಲಿ ಅಸೋಸಿಯೇಷನ್ ಆಫ್ ಬೆಂಗಳೂರು ಅಮೆಚೂರ್ ಅಸ್ಟ್ರೋನೋಮರ್ಸ್ ವತಿಯಿಂದ ಬುಧವಾರ ಮಧ್ಯಾಹ್ನ 12:17ರಿಂದ 12:25ರವರೆಗೆ ಇದ್ದ ಝೀರೋ ಶ್ಯಾಡೋ ಡೇ ಪ್ರಯುಕ್ತ ಜನರಿಗೆ ವಿಶೇಷ ವೀಕ್ಷಣೆ ಮತ್ತು ಈ ದಿನದ ವಿಶೇಷತೆ ಕುರಿತು ಮಾಹಿತಿ ನೀಡುವ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಈ ಕುರಿತು 'ಈಟಿವಿ ಭಾರತ್' ಜೊತೆಗೆ ಮಾತನಾಡಿದ ಹವ್ಯಾಸಿ ಖಗೋಳಶಾಸ್ತ್ರಜ್ಞ ರಾಮ್ ಮೋಹನ್, ಶೂನ್ಯ ನೆರಳಿನ ದಿನದ ಪ್ರಯುಕ್ತ ನೆಹರು ತಾರಾಲಯದ ಸಹಯೋಗದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯವಾಗಿ, ಮೂರು ಪ್ರಯೋಗಗಳನ್ನು ನಡೆಸಿದೆವು. ರೇಡಿಯೋ ಟೆಲಿಸ್ಕೋಪ್‌ಗಳನ್ನು ಬಳಸಿ ಸೂರ್ಯನ ಕಿರಣಗಳ ಚಲನೆ ಮತ್ತು ನೆರಳಿನ ಕುರಿತು ಅಧ್ಯಯನಗಳನ್ನು ನಡೆಸಿದೆವು. ಸ್ಟೆಲ್ಲಾರ್ ಸ್ಪೆಕ್ಟ್ರೋಸ್ಕೋಪಿ ಮುಖಾಂತರ ಸೂರ್ಯನ ಬೆಳಕನ್ನು ಛೇದಿಸುವ ಕೆಲಸ ನಡೆಯಿತು. ಸೂರ್ಯನ ಮೇಲಿನ ಕಪ್ಪು ಚುಕ್ಕೆಗಳನ್ನು ಲೈವ್ ಆಗಿ ಜನರಿಗೆ ತೋರಿಸಿದೆವು ಎಂದರು.
ಶೂನ್ಯ ನೆರಳಿನ ದಿನ ವರ್ಷದಲ್ಲಿ ಎರಡು ಬಾರಿ ಕಂಡುಬರುತ್ತದೆ. ಇಂದು ಮತ್ತು ಆಗಸ್ಟ್ ತಿಂಗಳಿನಲ್ಲಿ ಈ ವರ್ಷದ ಝೀರೋ ಶ್ಯಾಡೋ ಡೇ ನಡೆಯುತ್ತದೆ. ಸೂರ್ಯ ಸರಿಯಾಗಿ ನಮ್ಮ ನೆತ್ತಿಯ ಮೇಲೆ ಈ ಸಮಯದಲ್ಲಿ ಇರುತ್ತಾನೆ. ಆಗ ನಮ್ಮ ನೆರಳು ನಮಗೆ ಕಾಣುವುದಿಲ್ಲ. ಇತರೆ ದಿನಗಳಲ್ಲಿ ಮಧ್ಯಾಹ್ನದ ಸಮಯದಲ್ಲೂ ಸಹ ನೆರಳು ಕಾಣಸಿಗುತ್ತದೆ. ಆದರೆ ಝೀರೋ ಶಾಡೋ ದಿನದ ಅದೊಂದು ನಿಮಿಷ ಸ್ವಲ್ಪವೂ ನೆರಳು ಗೋಚರಿಸುವುದಿಲ್ಲ ಎಂದು ವಿವರಿಸಿದರು.
ಆರ್.ವಿ.ಕಾಲೇಜು ಮತ್ತು ಬಿಎಂಎಸ್ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಇಂದು ಅತ್ಯುತ್ಸಾಹದಿಂದ ಝೀರೋ ಶ್ಯಾಡೋ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹಲವು ಶಾಲೆಗಳ ಮಕ್ಕಳು ಸಹ ಇಲ್ಲಿ ನೆರೆದಿದ್ದರು. ಸಾಮಾನ್ಯ ಜನರು ಕೂಡ ಈ ದಿನದ ವಿಶೇಷದ ಬಗ್ಗೆ ಕೇಳಿ ತಿಳಿದುಕೊಂಡರು. ಒಟ್ಟಾರೆಯಾಗಿ ಎಲ್ಲರಲ್ಲೂ ವಿಜ್ಞಾನದ ಬಗೆಗೆ ಆಸಕ್ತಿ ಮೂಡಿರುವುದು ಒಳ್ಳೆಯ ವಿಚಾರವಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಬೆಂ.ಗ್ರಾಮಾಂತರ ಕ್ಷೇತ್ರದ ಮೇಲೆ ತೀವ್ರ ನಿಗಾ, ಹೆಚ್ಚುವರಿ ಅರೆಸೇನಾ ಪಡೆ ನಿಯೋಜನೆ: ಚುನಾವಣಾಧಿಕಾರಿ - Bengaluru Rural Constituency