ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅನುಮಾನಾಸ್ಪದ ವಹಿವಾಟುಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಕೂಡಲೇ ಪಾಲಿಕೆಯ ಚುನಾವಣಾ ವಿಭಾಗದ ಗಮನಕ್ಕೆ ತರಬೇಕು ಎಂದು ವಿಶೇಷ ಆಯುಕ್ತ ಸೆಲ್ವಮಣಿ ಅವರು ಬ್ಯಾಂಕ್ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆ ನಿಮಿತ್ತ ನಡೆದ ಬ್ಯಾಂಕ್ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಒಂದೇ ಖಾತೆಯಿಂದ ಸುಮಾರು ಖಾತೆಗಳಿಗೆ ಹಣ ವರ್ಗಾವಣೆಯಾದರೆ ಅದರ ಮಾಹಿತಿಯನ್ನು ನಮಗೆ ಕೊಡಬೇಕು. ಮಾಹಿತಿ ಕೊಡದಿದ್ದರೆ ಮುಂದಿನ ದಿನಗಳಲ್ಲಿ ನೀವೇ ಜವಾಬ್ದಾರರಾಗುತ್ತೀರಿ. ಅಲ್ಲದೇ ಚುನಾವಣಾ ಆಯೋಗದಿಂದ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಯಾವುದೇ ಪೂರ್ವ ನಿದರ್ಶನವಿಲ್ಲದೆ ಚುನಾವಣೆ ಪ್ರಕ್ರಿಯೆ ಸಮಯದಲ್ಲಿ ಹಲವಾರು ವ್ಯಕ್ತಿಗಳ ಖಾತೆಗಳಿಗೆ ಒಂದು ಬ್ಯಾಂಕ್ ಖಾತೆಯಿಂದ ಆರ್ ಟಿ ಜಿ ಎಸ್/ನೆಫ್ಟ್ ಮೂಲಕ ಹೆಚ್ಚು ಹಣ ವರ್ಗಾವಣೆ ಮಾಡುವದು, ಯಾವುದೇ ನಗದು ಠೇವಣಿ ಅಥವಾ 1 ಲಕ್ಷ ರೂ. ಗಿಂತ ಹೆಚ್ಚಿನ ನಗದು ಹಿಂಪಡೆಯುವಿಕೆ, ಮತದಾರರಿಗೆ ಹಣ ನೀಡಲು ಬಳಸಬಹುದಾದ ಯಾವುದೇ ಅನುಮಾನಾಸ್ಪದ ನಗದು ವಹಿವಾಟುಗಳ ಬಗ್ಗೆ ಚುನಾವಣಾ ವಿಭಾಗಕ್ಕೆ ಕೂಡಲೇ ಮಾಹಿತಿ ನೀಡುವಂತೆ ಸೂಚಿಸಿದರು.
ನಗದು ಠೇವಣಿ ಅಥವಾ ಹಿಂಪಡೆಯುವಿಕೆ ಮೊತ್ತವು 10 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ, ಅಂತಹ ಮಾಹಿತಿಯನ್ನು ಆದಾಯ ತೆರಿಗೆ ಕಾನೂನುಗಳಡಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಗೆ ರವಾನಿಸಲಾಗುವುದು ಎಂದರು.