ಹುಬ್ಬಳ್ಳಿ :ಇಂದು ಕೆಆರ್ಪಿಪಿ ಪಕ್ಷವನ್ನು ಬಿಜೆಪಿಗೆ ವಿಲೀನಗೊಳಿಸಿ ಬಿಜೆಪಿ ಸೇರ್ಪಡೆಯಾದ ಜನಾರ್ದನ ರೆಡ್ಡಿಯನ್ನು ಈ ಹಿಂದೆ ಪ್ರಧಾನಿಯವರೇ ದೂರ ಇಟ್ಟಿದ್ದರು. ಇದೀಗ ಚುನಾವಣೆಯಲ್ಲಿ ಸೀಟುಗಳು ಕಡಿಮೆ ಬರುತ್ತವೆ ಎಂಬ ಸರ್ವೇ ರಿಪೋರ್ಟ್ ಬರುತ್ತಿದ್ದಂತೆಯೇ ಬಿಜೆಪಿಯವರು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ವಿಲೀನಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಟೀಕಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೇ ಯಾವುದೇ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರು ವಾಷಿಂಗ್ ಪೌಡರ್ ನಿರ್ಮಾ ಆಗಲಿದ್ದಾರೆ ಎಂದು ಲೇವಡಿ ಮಾಡಿದರು.
''ಅದೇ ರೀತಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆಯಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನಾನು ಲಂಚವನ್ನು ತಿನ್ನಿಸುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳುತ್ತಿದ್ದರು. ಇದೀಗ ಭ್ರಷ್ಟಾಚಾರ ಆರೋಪ ಹೊತ್ತಿರುವ ಜನಾರ್ದನ ರೆಡ್ಡಿಯವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ'' ಎಂದು ಸಚಿವ ಲಾಡ್ ಹರಿಹಾಯ್ದರು.
''ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಈ ಹಿಂದೆ ಶೇ. 37ರಷ್ಟು ಮತಗಳು ಬಂದಿದ್ದವು. ಇದೀಗ ಶೇ.29ರಷ್ಟು ಬರಬಹುದು. ದೇಶಾದ್ಯಂತ 200 ಸೀಟುಗಳು ಬಿಜೆಪಿಗೆ ಬರಲಿವೆ. ಇದು ಸರ್ವೇ ಮಾಹಿತಿಯಿಂದಲೇ ಬಹಿರಂಗಗೊಂಡಿದೆ'' ಎಂದು ಆರೋಪಿಸಿದರು.