ಬಳ್ಳಾರಿ: ನಗರದ ಮಾರ್ಕಂಡೇಯ ಕಾಲೋನಿಯಲ್ಲಿ ದುಷ್ಕರ್ಮಿಗಳು ವಾಮಾಚಾರ ಮಾಡಿದ್ದು, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದಾರೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ನಾಲ್ಕು ತಲೆ ಬುರುಡೆ, ಎಲುಬುಗಳನ್ನು ಇಟ್ಟು, ಕೂದಲು ಸುಟ್ಟು, ದೀಪ ಹಚ್ಚಿಟ್ಟು ವಾಮಾಚಾರ ಮಾಡಿದ್ದಾರೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ವಾಮಾಚಾರ ಮಾಡಿದ ಸ್ಥಳದಲ್ಲಿ ವಾಟರ್ ಟ್ಯಾಂಕ್ ಇರುವುದರಿಂದ ನಿವಾಸಿಗಳು ನೀರು ತೆಗೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಪಕ್ಕದಲ್ಲಿಯೇ ಅಂಗನವಾಡಿ ಇರುವುದರಿಂದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಮುಂದಾಗುತ್ತಿಲ್ಲ. ಸದ್ಯ ಸ್ಥಳಕ್ಕೆ ಬ್ರೂಸ್ ಪೇಟೆ ಪೊಲೀಸರು ಆಗಮಿಸಿ ತಲೆ ಬುರುಡೆ, ಎಲುಬುಗಳನ್ನು ತೆರವುಗೊಳಿಸಿದ್ದಾರೆ.
ಸ್ಥಳೀಯರ ಮತ್ತು ಎಸ್ಪಿ ಪ್ರತಿಕ್ರಿಯೆ (ETV Bharat) ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಂಗನವಾಡಿ ಶಿಕ್ಷಕಿ ವಿಜಯಲಕ್ಷ್ಮಿ ಮಾತನಾಡಿ, "ಅಂಗನವಾಡಿ ಬಳಿ ಇದೀಗ ಎರಡನೇ ಬಾರಿಗೆ ವಾಮಾಚಾರ ಮಾಡಿದ್ದಾರೆ. ಇದರಿಂದ ಅಂಗನವಾಡಿಗೆ ಮಕ್ಕಳೇ ಬರುತ್ತಿಲ್ಲ. ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ" ಎಂದು ತಿಳಿಸಿದರು.
ಸ್ಥಳೀಯರಾದ ಚಿನ್ನ ಮಾತನಾಡಿ, "ತಲೆ ಬುರುಡೆಗಳನ್ನಿಟ್ಟು ಎರಡನೇ ಬಾರಿಗೆ ವಾಮಾಚಾರ ಮಾಡಿದ್ದಾರೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ" ಎಂದು ಹೇಳಿದರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ ಪ್ರತಿಕ್ರಿಯಿಸಿ, "ಅಮಾವಾಸ್ಯೆ ಹಿನ್ನೆಲೆ ವಾಮಾಚಾರ ಮಾಡಿರಬಹುದು. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ತನಿಖೆ ನಡೆಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಆಂಧ್ರ ಕ್ರಿಕೆಟಿಗನಿಗೆ ಸ್ಪಾನ್ಸರ್‌ಶಿಪ್ ಹೆಸರಿನಲ್ಲಿ ಹಣ ಪಡೆದು ವಂಚನೆ: ಪ್ರಕರಣ ದಾಖಲು