ಬೆಂಗಳೂರು:ಆಸ್ತಿ ವಿಚಾರವಾಗಿ ಮಾರಕಾಸ್ತ್ರದಿಂದ ಹೊಡೆದು ಮಹಿಳೆಯನ್ನ ಹತ್ಯೆ ಮಾಡಿರುವ ಆರೋಪದಡಿ ಆರು ಜನ ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಾಗರ್ (20), ಆಕಾಶ್ (19), ಶಿವಶಂಕರ್ (50), ಪ್ರವೀಣ್ (24), ಪೂಜಾ (22) ಹಾಗೂ ಗಾಯತ್ರಿದೇವಿ ಬಂಧಿತ ಆರೋಪಿಗಳು. ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿ ಸ್ಟ್ಯಾಫ್ ನರ್ಸ್ ಆಗಿದ್ದ ಸೌಮಿನಿ ಸತ್ಯಭಾಮಾ (46) ಎಂಬುವರನ್ನು ಜೂನ್ 11 ರಂದು ರಾತ್ರಿ ಹೋಟೆಲ್ ಬಳಿಯೇ ಹೆಲ್ಮೆಟ್ ಧರಿಸಿಕೊಂಡು ಬಂದಿದ್ದ ಆರೋಪಿಗಳು ಕೊಲೆ ಮಾಡಿದ್ದರು.
ಆರೋಪಿಗಳ ಪೈಕಿ ಶಿವಶಂಕರ್ ಹಾಗೂ ಸಾಗರ್ ತಂದೆ, ಮಗ ಆಗಿದ್ದಾರೆ. ಕೊಲೆಯಾದ ಸೌಮಿನಿಯ ಸಹೋದರನಾಗಿದ್ದ ಶಿವಶಂಕರನಿಗೆ ಪೋಷಕರ ಆಸ್ತಿಯಲ್ಲಿ ಭಾಗ ಬಂದಿಲ್ಲ ಎಂಬ ಕಾರಣಕ್ಕೆ ಆತನ ಮಗ ಸಾಗರ್ ಸಿಟ್ಟಾಗಿದ್ದ. ಅದೇ ಕಾರಣಕ್ಕೆ ಸೋದರತ್ತೆಯನ್ನ ಹತ್ಯೆ ಮಾಡಲು ನಿರ್ಧರಿಸಿದ್ದ ಸಾಗರ್, ಜೂನ್ 11 ರಂದು ಸೌಮಿನಿ ತನ್ನ ಕೆಲಸ ಮುಗಿಸಿ ಹೊರಡುತ್ತಿದ್ದಂತೆ ವಿಂಡ್ಸರ್ ಮ್ಯಾನರ್ ಸೇತುವೆ ಬಳಿ ದಾಳಿ ಮಾಡಿಸಿದ್ದ. ಹೊಂಚು ಹಾಕಿ ಸೇತುವೆ ಬಳಿ ಕಾದು ಕುಳಿತಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಹೊಡೆದು ಸೌಮಿನಿಯನ್ನು ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಹತ್ಯೆ ಮಾಡಿದ್ದ ಆರೋಪಿಗಳು ಹಾಗೂ ಸಂಚು ರೂಪಿಸಿದ್ದ ಶಿವಶಂಕರ್ ಕುಟುಂಬಸ್ಥರ ಸಹಿತ ಒಟ್ಟು ಆರು ಜನ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ಇದುವರೆಗೂ ಎಲ್ಲೆಲ್ಲಿ ಸ್ಥಳ ಮಹಜರು, ಏನೆಲ್ಲಾ ವಶ? ನೀವೇ ನೋಡಿ! - Renukaswamy murder case