ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕಳೆದ ವರ್ಷಕ್ಕಿಂತ 1,000 ಕೋಟಿ ಹೆಚ್ಚು ತೆರಿಗೆ ಸಂಗ್ರಹಕ್ಕೆ ರಾಜ್ಯ ಸರ್ಕಾರ ಗುರಿ ನೀಡಲಾಗಿದ್ದು, ಜನರ ಮೇಲೆ ಹೆಚ್ಚುವರಿ ತೆರಿಗೆ ಭಾರ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನಲ್ಲಿ 6,000 ಕೋಟಿ ರೂಪಾಯಿ ಸಂಗ್ರಹಕ್ಕೆ ಬಜೆಟ್ ಮೂಲಕ ಸರ್ಕಾರ ಸೂಚಿಸಿದೆ. ಇದೇ ವೇಳೆ ಸಿಲಿಕಾನ್ ಸಿಟಿಗೆ ಭರಪೂರ ಕೊಡುಗೆಗಳೂ ಸಿಕ್ಕಿವೆ.
ಪಾಲಿಕೆ ವ್ಯಾಪ್ತಿಯಲ್ಲಿ ಜಾಹೀರಾತಿನ ಮೂಲಕ 2,000 ಕೋಟಿ ರೂಪಾಯಿ ಸಂಗ್ರಹಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಆದರೆ ಮುಂದಿನ ಬಾರಿ ಸಂಗ್ರಹಿಸಲಾಗುವ ಹೆಚ್ಚುವರಿ ತೆರಿಗೆಯಲ್ಲಿ, ಪಾಲಿಕೆ ವ್ಯಾಪ್ತಿಯಲ್ಲಿ 147 ಕಿಮೀ ವ್ಯಾಪ್ತಿಯ ವೈಟ್ ಟ್ಯಾಪಿಂಗ್ ರಸ್ತೆಗಳು ಅಭಿವೃದ್ದಿಗೊಳ್ಳಲಿದೆ. ಸಂಚಾರ ಸಮಸ್ಯೆ ಬಗೆಹರಿಸಲು1700 ಕೋಟಿ ರೂಪಾಯಿ ವೆಚ್ಚದ ವೈಟ್ ಟ್ಯಾಪಿಂಗ್ ಡಿಸೆಂಬರ್ 2025ಕ್ಕೆ ಪೂರ್ಣಗೊಳ್ಳಲಿದೆ. ರಸ್ತೆ ಅಗಲೀಕರಣ, ಟನ್ನೆಲ್ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಲಾಗಿದೆ. ನಗರದ ಪ್ರಥಮ ಟನ್ನೆಲ್ ರೋಡ್ ಹೆಬ್ಬಾಳ ಜಂಕ್ಷನ್ ಮುಂದಿನ ವರ್ಷ ಪೂರ್ಣಗೊಳ್ಳಲಿದೆ.
ಎಲ್ಲ ಹವಾಮಾನದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ 100 ಕಿಮೀ ರಸ್ತೆಗಳು ಪೂರ್ಣಗೊಳ್ಳಲಿದೆ. ಇನ್ನೂ 100 ಕಿಮೀ ರಸ್ತೆಗಳು ಮುಂದಿನ ಸಾಲಿನಲ್ಲಿ ಪೂರ್ಣಗೊಳ್ಳಲಿದೆ. ಸಂಚಾರ-ಬ್ರ್ಯಾಂಡ್ ಬೆಂಗಳೂರಿನ ಅಡಿಯಲ್ಲಿ ತಜ್ಞರ ಸಮಿತಿಯಿಂದ ವರದಿ ಪಡೆದು ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಕೂಡ ನೀಡುವ ಭರವಸೆ ನೀಡಲಾಗಿದೆ. ಪಿಪಿಪಿ ಮಾಡೆಲ್ ಮೂಲಕ 27,000 ಕೋಟಿ ರೂಪಾಯಿ ವೆಚ್ಚದಲ್ಲಿ 73 ಕಿಮೀ ಪೆರಿಫೆರಲ್ ರಿಂಗ್ ರೋಡ್-ಬೆಂಗಳೂರು ಬುಸಿನಸ್ ಕಾರಿಡಾರ್ ನಿರ್ಮಾಣವಾಗಲಿದೆ. ವಿಶ್ವದರ್ಜೆಯ ಪ್ರವಾಸೋದ್ಯಮ ಕೇಂದ್ರವನ್ನಾಗಿ 250 ಮೀ ಎತ್ತರದ ಸ್ಕೈ ಡೆಕ್ ನಿರ್ಮಾಣಮಾಡಲು ಹೆಸರಾಂತ ವಾಸ್ತುಶಿಲ್ಪಿಗಳನ್ನು ಬಳಕೆ ಮಾಡಲಾಗುತ್ತಿದೆ. 20 ಲಕ್ಷ ನಿವೇಶನ, ಮನೆ, ಅಪಾರ್ಟ್ಮೆಂಟ್, ಕಾಂಪ್ಲೆಕ್ಸ್ಗಳನ್ನು ಡಿಜಿಟೈಸಷನ್‌ಗೊಳಿಸಲು ಬಜೆಟ್‌ನಲ್ಲಿ ಸೂಚಿಸಲಾಗಿದೆ.
ಅರ್ಬನ್ ಡೆವಲಪ್ಮೆಂಟ್ ಮೂಲಕ ಬಿ.ಬಿ.ಎಂ.ಪಿ, ಬಿ.ಎಂ.ಆರ್.ಸಿ.ಎಲ್, ಬಿ.ಡಬ್ಲ್ಯೂ.ಎಸ್.ಎಸ್.ಬಿ, ಬಿಡಿಎ ಸಂಸ್ಥೆಗಳಿಗಾಗಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಿ ವಿದ್ಯುತ್ ಬಿಲ್ ತಗ್ಗಿಸುವ ಪ್ಲಾನ್ ಮಾಡಲಾಗಿದೆ. ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು, ಬಿ.ಎಂ.ಟಿ.ಸಿ ಸಂಸ್ಥೆಗಳನ್ನು ಸಂಯೋಜಿಸಿ ಮಾಡೆಲ್ ಪಬ್ಲಿಕ್ ಟ್ರಾಸ್ಪೋರ್ಟ್ ವ್ಯವಸ್ಥೆಯನ್ನು ತರಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.