ಬೆಂಗಳೂರು: ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಪ್ರಸಕ್ತ ಸಾಲಿನಲ್ಲಿ 500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಂದ ಎರಡು ವರ್ಷಗಳ ಜೆಇಇ/ ನೀಟ್ಗೆ ಉಚಿತ ತರಬೇತಿ ನೀಡಲಾಗುವುದು. ಜೊತೆಗೆ ರಾಜ್ಯದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಎಲ್ಎಟಿ, ಎಂಎಟಿ ಮತ್ತು ಚಾರ್ಟೆಡ್ ಅಕೌಂಟೆಡ್ ಫೌಂಡೇಷನ್ ಪರೀಕ್ಷೆಗಳಿಗೆ ಸಿದ್ಧಗೊಳಿಸಲು ಪರೀಕ್ಷಾ ಪೂರ್ವ ತರಬೇತಿ ನೀಡಲು ಕ್ರಮಕ್ಕೆ ಮುಂದಾಗಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಈ ಬಾರಿ ಬಜೆಟ್ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಶೇ 3ರಷ್ಟು ಅಂದರೆ 13334 ಕೋಟಿ ರೂ ಹಣವನ್ನು ಮೀಸಲಿರಿಸಲಾಗಿದೆ.
ಅಲೆಮಾರಿ ಆಯೋಗ ರಚನೆ: ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಲು ʻಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಆಯೋಗʼ ರಚನೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಆಶ್ರಮ ಶಾಲೆಗಳನ್ನು ಡಿ.ದೇವರಾಜು ಅರಸು ವಸತಿ ಶಾಲೆಗಳು ಎಂದು ಮರುನಾಮಕರಣ ಮಾಡಲಾಗುವುದು ಎಂದು ಬಜೆಟ್ನಲ್ಲಿ ಪ್ರಕಟಿಸಲಾಗಿದೆ.
ಹಿಂದುಳಿದ ವರ್ಗ ವಿದ್ಯಾರ್ಥಿಗಳಿಗೆ ನೀಡಿರುವ ಹೊಸ ಯೋಜನೆ: ಇದರ ಜೊತೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆಗಳು ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ ಒಟ್ಟು 2,710 ಕೋಟಿ ರೂ.ಗಳನ್ನು ಒದಗಿಸಲಾಗುವುದು. ವಸತಿ ಶಾಲೆಗಳು ಇಲ್ಲದಿರುವ ಹೋಬಳಿಗಳ ಪೈಕಿ 20 ಹೋಬಳಿಗಳಲ್ಲಿ ಹೊಸ ವಸತಿ ಶಾಲೆಗಳನ್ನು ಕ್ರೈಸ್ ಸಂಸ್ಥೆಯ ಮೂಲಕ ಪ್ರಾರಂಭಿಸಲಾಗುವುದು. ಶೈಕ್ಷಣಿಕವಾಗಿ ಪ್ರಮುಖ ನಗರಗಳಲ್ಲಿ ವಸತಿನಿಲಯಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ 31 ಹೊಸ ಮೆಟ್ರಿಕ್ ನಂತರದ ವಸತಿನಿಲಯಗಳನ್ನು ಮಂಜೂರು ಮಾಡಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ಅಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಸತಿ ನಿಲಯಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳ ವಿದ್ಯಾರ್ಥಿಗಳ ಭೋಜನ ವೆಚ್ಚವನ್ನು ಪ್ರತಿ ವಿದ್ಯಾರ್ಥಿಗೆ ಪ್ರತಿ ಮಾಹೆಗೆ 100 ರೂ. ನಂತೆ ಹೆಚ್ಚಿಸಲಾಗುವುದು ಹಣಕಾಸು ಸಚಿವರು ಹೇಳಿದ್ದಾರೆ.
ವಸತಿ ನಿಲಯ ಅಭಿವೃದ್ಧಿಗೆ ಕ್ರಮ: ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿರುವ 18 ವಿದ್ಯಾರ್ಥಿನಿಲಯಗಳಿಗೆ ಸ್ವಂತ ಕಟ್ಟಡಗಳನ್ನು 2024-25ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಮುಖಾಂತರ ನಿರ್ಮಾಣ ಮಾಡಲಾಗುವುದು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ವಿದ್ಯಾರ್ಥಿನಿಲಯಗಳಿಗೆ ನಾಲ್ಕು ಕೋಟಿ ರೂ. ಗಳ ಘಟಕ ವೆಚ್ಚದಲ್ಲಿ ಸ್ವಂತ ಕಟ್ಟಡಗಳನ್ನು ನಿರ್ಮಾಣ. 2024-25ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಇಲಾಖೆಗಳಿಗೆ ಸೇರಿದ ಒಟ್ಟು 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ ಕಾಮಗಾರಿಗಳನ್ನು 638 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ 100 ಸಂಖ್ಯಾಬಲದ ಮೆಟ್ರಿಕ್ ನಂತರದ 75 ಬಾಲಕರ ಮತ್ತು 75 ಬಾಲಕಿಯರ ವಸತಿನಿಲಯಗಳ ಪ್ರಾರಂಭ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.