ಬೆಂಗಳೂರು: ನಿಮ್ಮೆ ತಂದೆಯ ಹೆಸರಾದ ಖರ್ಗೆ ಪದ ನಾಮ ಬಿಟ್ಟು ಚುನಾವಣೆ ಗೆದ್ದು ತೋರಿಸಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ. ಇಂದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಗೆಲ್ಲುವುದು ಮುಖ್ಯವಲ್ಲ, ದೊಡ್ಡ ಅಂತರದಿಂದ ಗೆಲ್ಲಬೇಕು, ನಿಮ್ಮ ಮೇಲೆ ನನಗೆ ವಿಶ್ವಾಸ ಇದೆ, ಇದು ನಿರ್ಣಾಯಕ ಚುನಾವಣೆ, ದೇಶದ ಬಗ್ಗೆ ಪ್ರಿಯಾಂಕಾ ಖರ್ಗೆ ಬಹಳ ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ, ನಿಮ್ಮ ತಂದೆಯ ಖರ್ಗೆ ಹೆಸರು ಬಿಟ್ಟು ನೀವು ಸ್ವಂತ ಸ್ಪರ್ಧೆ ಮಾಡಿ ಗೆದ್ದು ತೋರಿಸಿ, ಆಗ ನಿಮ್ಮ ಹಣೆ ಬರಹ ಏನೆಂದು ಗೊತ್ತಾಗುತ್ತದೆ ಎಂದು ಸವಾಲು ಹಾಕಿದರು.
ಈ ಕ್ಷೇತ್ರ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಇದೆ ಎಂದು ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಹೆಸರು ಪ್ರಸ್ತಾಪಿಸದೇ ಟಾಂಗ್ ಕೊಟ್ಟ ಕರಂದ್ಲಾಜೆ, ಒಗ್ಗಟ್ಟಾಗಿ ಹೋದರೆ ದೊಡ್ಡ ಅಂತರದಿಂದ ಗೆಲ್ಲಬಹುದು, ಇಲ್ಲಿ ಯಾರದ್ದು ವ್ಯೆಯಕ್ತಿಕ ಪ್ರತಿಷ್ಠೆ ಇಲ್ಲ, ಸಂಘಟನೆ, ಚುನಾವಣೆ ಏನಾದರೂ ಸರಿ ನಿಮ್ಮ ಅಕ್ಕನಾಗಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಲೋಕಸಭಾ ಚುನಾವಣೆಯ ಕಾವು ಏರುತ್ತಿದೆ, ಕಾಂಗ್ರೆಸ್ಸಿನ ಪಟ್ಟಿ ಬಿಡುಗಡೆ ಆಗಿದೆ, ಕೇವಲ ತಮ್ಮ ಮಕ್ಕಳಿಗೆ, ತಮ್ಮ ಮನೆ ಮಂದಿಗೆ, ಬೀಗರಿಗೆ ಸೀಮಿತವಾದ ಪಟ್ಟಿ ನೋಡಿದ್ದೇವೆ, ಕಾಂಗ್ರೆಸ್ನಂತಹ ಪಕ್ಷದಲ್ಲಿನ ಪಟ್ಟಿ ಬಗ್ಗೆ ಆಶ್ಚರ್ಯ ಆಗುತ್ತದೆ, ಆ ಪಕ್ಷದಲ್ಲಿ ಸ್ಪರ್ಧೆ ಮಾಡುವುದಕ್ಕೂ ಮುಖಂಡರು ಸಿಕ್ಕಿಲ್ಲ, ಬಿಜೆಪಿಗೆ ಒಂದು ಉತ್ಸಾಹದ ವಾತವರಣ ಕಂಡು ಬರ್ತಿದೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಗುಜರಾತ್ನಂತೆ ರಾಜ್ಯದಲ್ಲಿ 100 ರಷ್ಟು ರಿಸಲ್ಟ್ ಕೊಡಬೇಕು ಎಂಬ ಭಾವನೆ ಎಲ್ಲರಲ್ಲೂ ಇದೆ, ನನ್ನ ಲೋಕಸಭಾ ಕ್ಷೇತ್ರ ತುಂಬಾ ಚೆನ್ನಾಗಿದೆ, ನನ್ನ ಭಾಗದಲ್ಲಿ ಎಲ್ಲರೂ ತುಂಬಾ ಸಪೋರ್ಟ್ ಮಾಡ್ತಿದ್ದಾರೆ, ಹೆಚ್ಚು ಮತಗಳ ಅಂತರ ಗೆಲ್ಲುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರ್ತಪೇಟೆ ಗಲಾಟೆ ಕಾಂಗ್ರೆಸ್ಗೆ ಚಿಕ್ಕ ಗಲಾಟೆ ಆಗಿರಬಹುದು, ಕಾಂಗ್ರೆಸ್ಸಿನ ಕಣ್ಣಿಗೆ ಪೊರೆ ಬಂದಿದೆ, ಅವರಿಗೆ ಅಲ್ಪಸಂಖ್ಯಾತರು ಬಿಟ್ಟು ಬೇರೆ ಯಾರು ಕಾಣೋದಿಲ್ಲ, ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡ್ತಾರೆ, ಆದರೆ ಕಾಂಗ್ರೆಸ್ ಸರ್ಕಾರ ಹಲ್ಲೆಗೊಳಗಾದವನ ಮೇಲೆಯೇ ಕೇಸ್ ಹಾಕಿದೆ, ನಮ್ಮ ದೃಷ್ಟಿಯಲ್ಲಿ ಇದು ಚಿಕ್ಕ ಘಟನೆ ಅಲ್ಲ, ಇದು ನಮಗೆ ಮಾಡಿರುವ ಅಪಮಾನ, ಶ್ರೀರಾಮ ಚಂದ್ರನಿಗೆ ಮಾಡಿರುವ ಅಪಮಾನ, ಹಲ್ಲೆ ಮಾಡಿದ್ದನ್ನು ಕಾಂಗ್ರೆಸ್ ಪ್ರಶ್ನೆ ಮಾಡದ್ದಕ್ಕೆ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ, ಬಾಂಬ್ಗಳು ಹಾಕ್ತಾರೆ, ಆ್ಯಸಿಡ್ ಹಾಕ್ತಾರೆ, ಇನ್ನೂ ಯಾರೋ ಬಂದು ಪಾಕಿಸ್ತಾನ ಪರ ಘೋಷಣೆ ಕೂಗ್ತಾರೆ, ವಿಧಾನಸೌಧಕ್ಕೆ ದೇಶದ್ರೋಹಿಗಳನ್ನು ಬಿಟ್ಟುಕೊಂಡ ಪರಿಣಾಮ ಇಂತಹ ಪರಿಸ್ಥಿತಿ ಉಂಡಾಗಿದೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅಲ್ಪಸಂಖ್ಯಾತರ ಓಲೈಸಿ ಹಿಂದೂಗಳ ದಮನ ನೀತಿ ಅನುಸರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ರಾಜ್ಯದಲ್ಲಿ ಗ್ಯಾರಂಟಿ ವಿಫಲ - ಭಾರತಿ ಶೆಟ್ಟಿ: ಎಂಎಲ್ಸಿ ಭಾರತಿ ಶೆಟ್ಟಿ ಮಾತನಾಡಿ, ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ನುಡಿದಂತೆ ನಡೆದಿಲ್ಲ, ರಾಜ್ಯದಲ್ಲಿ ನೀರಿಗಾಗಿ ಹಾಹಾಕಾರ ನಡೆಯುತ್ತಿದೆ. ನೀರಿಗಾಗಿ ಟ್ಯಾಂಕರ್ ಮಾಫಿಯಾ ಸಹ ನಡೆಯುತ್ತಿದೆ, ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ತಿಲ್ಲ, ಪರಿಹಾರದ ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎಂದು ಸಚಿವರು ಹೇಳ್ತಾರೆ, ಇದನ್ನೆಲ್ಲ ನೋಡಿದರೆ ಕಾಂಗ್ರೆಸ್ ರೈತ ವಿರೋಧಿ ಸರ್ಕಾರ ಎಂದು ಹೇಳಬಹುದು, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ಬಿಜೆಪಿ ಕೊಟ್ಟಿರುವ ಯೋಜನೆಯನ್ನು ತಮ್ಮ ಯೋಜನೆ ಅಂತ ಹೇಳಿಕೊಂಡು ಓಡಾಡ್ತಿದೆ. ಜನಪರ ಕಾರ್ಯಕ್ರಮ ಯಾವುದೂ ಇಲ್ಲ, ಬಿಜೆಪಿ ಮಾಡಿದ ಕೆಲಸವನ್ನು ತಾವು ಮಾಡಿದ್ದೇವೆ ಎಂದು ಹೇಳಿಕೊಳ್ತಿದೆ, ಯಾವುದೋ ಒಂದು ಸಮುದಾಯ ಮೆಚ್ಚಿಸಲು ದೇಶ ವಿರೋಧಿ ಘೋಷಣೆ ಕೂಗುವವರಿಗೆ ಬೆಂಬಲ ಕೊಡ್ತಿದೆ, ನಮ್ಮ ವೈರಿ ರಾಷ್ಟ್ರದ ಪರವಾಗಿ ಘೋಷಣೆ ಕೂಗಿದವರನ್ನು ರಕ್ಷಣೆ ಮಾಡುತ್ತಾರೆ, ಒಂದು ಸಮುದಾಯದ ಒಲೈಕೆಗಾಗಿ ದೇವಸ್ಥಾನದ ಹುಂಡಿಗೆ ಕೈ ಹಾಕುವ ಕೆಲಸ ಸರ್ಕಾರ ಮಾಡಿದೆ, ಹಿಂದೂಗಳು ದಮನ ಮಾಡುವ ಕೆಲಸ ಕಾಂಗ್ರೆಸ್ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು.
ಎಂಎಲ್ಸಿ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ನಾನೇ ಸ್ಟ್ರಾಂಗ್ ಸಿಎಂ ಅಂತ ಸಿದ್ದರಾಮಯ್ಯ ಹೇಳಿಕೊಂಡು ಓಡಾಡುತ್ತಾರೆ, ಇವರಿಗೆ ಸ್ಟ್ರಾಂಗ್ ಸಿಎಂ ಅಂತ ಸರ್ಟಿಫಿಕೇಟ್ ಕೊಟ್ಟವರು ಯಾರು? ದಲಿತರನ್ನು ಮುಗಿಸುವುದರಲ್ಲಿ, ಕಾಂಗ್ರೆಸ್ ಪಕ್ಷ ಮುಗಿಸುವುದರಲ್ಲಿ ಇವರು ಬಹಳ ಸ್ಟ್ರಾಂಗ್ ಇದ್ದಾರೆ, ನೀವು ಮೋದಿ ಕಾಲಿನ ದೂಳಿಗೂ ಸಮವಲ್ಲ ಎಂದರು.
ಚುನಾವಣೆ ಮೊದಲು ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಿದಿರಿ, ಬಿಜೆಪಿ ಸರ್ಕಾರಕ್ಕೆ ಮೇಕೆದಾಟು ಬಗ್ಗೆ ಕಾಳಜಿ ಇಲ್ಲ ಅಂತ ಹೇಳಿದಿರಿ, ನಾವು ಮಾಡಲಿಲ್ಲ, ನೀವು ಮಾಡಬೇಕಿತ್ತು, ಆದರೆ ನಿಮ್ಮ ಡಿಎಂಕೆ ಏಕೆ ಮುಂದಾಗುತ್ತಿಲ್ಲ? ಇಂಡಿಯಾ ಅಲೆಯನ್ಸ್ ಗೆದ್ದರೆ ಮೇಕೆದಾಟು ಮಾಡಲು ಅವಕಾಶ ಕೊಡಲ್ಲ ಅಂತ ಪ್ರಣಾಳಿಕೆಯಲ್ಲಿ ಹಾಕಿಕೊಂಡಿದ್ದಾರೆ, ಹಾಗಾದರೆ ನೀವೇ ಇಂಡಿಯಾ ಅಲೆಯನ್ಸ್‌ನಿಂದ ಹೊರಗಡೆ ಬರ್ತೀರಾ? ಹಾಗಾದರೆ ಮೇಕೆದಾಟು ವಿರೋಧ ಮಾಡುವ ಡಿಎಂಕೆ ವಿರುದ್ಧ ಯಾವಾಗಾ ಪಾದಯಾತ್ರೆ ಮಾಡ್ತೀರಾ? ಕಾಂಗ್ರೆಸ್ನವರು ಸಾಂದರ್ಭಿಕವಾಗಿ ನಾಟಕ ಮಾಡ್ತಾರೆ ಎಂದು ಹಲವು ವಿಚಾರಗಳನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.
ಸದಾನಂದಗೌಡ ಶುದ್ಧೀಕರಣ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ನಾರಾಯಣಸ್ವಾಮಿ, ಅದು ಅವರ ವೈಯಕ್ತಿಕ ವಿಚಾರ ಆಗಿದ್ದರೂ ಮೋದಿ ಅವರು ಇಡೀ ದೇಶವನ್ನೇ ಶುದ್ದೀಕರಣ ಮಾಡಬೇಕು ಅಂತ ಹೇಳಿದ್ದರು, ಅದೇ ರೀತಿಯಲ್ಲಿ ಈಗ ಇಡೀ ದೇಶದ ಶುದ್ಧೀಕರಣ ಆಗಿದೆ, ಸದಾನಂದಗೌಡರು ಯಾರ ಹೆಸರನ್ನು ಹೇಳಿಲ್ಲ, ಅರ್ಥ ಮಾಡಿಕೊಂಡಿರುವವರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಅಂತ ಸದಾನಂದಗೌಡರೇ ಹೇಳಿದ್ದಾರೆ. ನಾನು ಬೆಳಗ್ಗೆಯಷ್ಟೇ ಸದಾನಂದಗೌಡ ಜೊತೆಗೆ ಮಾತನಾಡಿದ್ದೇನೆ, ಯಾವುದೇ ಗೊಂದಲ ಇಲ್ಲ, ಏನಾದರೂ ಇದ್ದರೆ ಹೈಕಮಾಂಡ್ ನಾಯಕರನ್ನೇ ಕೇಳಬೇಕು ಎಂದರು.
ಇದನ್ನೂ ಓದಿ:ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ ಸೋತರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಶಿವಗಂಗಾ ಬಸವರಾಜ್ - MLA Shivaganga Basavaraj