ಬೆಂಗಳೂರು: ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಮೂರನೇ ಬಾರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಈ ಬಾರಿ ಹೊಸ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಮೋದಿ ಬಲ ಹೆಚ್ಚಿಸಲು ಬೆಂಗಳೂರು ಉತ್ತರ ಕ್ಷೇತ್ರದ ಜನತೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ. ಈ ಕುರಿತು ಅಭ್ಯರ್ಥಿ ಶೋಭಾ ಕರಂದ್ಲಾಜೆ ಜೊತೆ ನಮ್ಮ ಪ್ರತಿನಿಧಿ ಪ್ರಶಾಂತ್ ಬಸವಾಪಟ್ಟಣ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಬೆಂಗಳೂರು ಉತ್ತರದಲ್ಲಿ ಪ್ರಚಾರ ಯಾವ ರೀತಿ ನಡೆಯುತ್ತಿದೆ?:ಉತ್ತರ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿಯೂ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ಓಡಾಡುತ್ತಿದ್ದಾರೆ. ಖುಷಿಯಾಗಿದ್ದು, ಎನೆರ್ಜಿಟಿಕ್ ಆಗಿದ್ದಾರೆ. ಕ್ಷೇತ್ರದಲ್ಲಿ ತುಂಬಾ ಚನ್ನಾಗಿ ಪ್ರಚಾರ ನಡೆಯುತ್ತಿದೆ. ನಾವು ನಮ್ಮ ಬೂತ್ಗಳನ್ನು ಕೇಂದ್ರೀಕರಿಸಿ ಪ್ರಚಾರ ಮಾಡುತ್ತಿದ್ದೇವೆ. ಬೂತ್ ಮಟ್ಟದಲ್ಲಿ ಮನೆ ಮನೆಗೆ ಮೋದಿ ಸಂದೇಶ ತಲುಪಿಸಿ, ಮೋದಿ ಯೋಜನೆ, ಅಭಿವೃದ್ಧಿ ಕಾರ್ಯಗಳು, 10 ವರ್ಷದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡುತ್ತಿದ್ದೇವೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಒಟ್ಟಾಗುತ್ತಿದ್ದಾರೆ. ವಾರ್ಡ್ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಪ್ರಚಾರ ಕಾರ್ಯ ನಿರ್ವಹಿಸುತ್ತಿದ್ದೇವೆ.
ಪ್ರಚಾರಕ್ಕೆ ಜನತೆಯಿಂದ ಪ್ರತಿಕ್ರಿಯೆ?:ಕ್ಷೇತ್ರದ ಜನತೆ ತುಂಬಾ ಉತ್ಸಾಹದಲ್ಲಿದ್ದಾರೆ. ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಹಂಬಲ ಹೊಂದಿದ್ದಾರೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯನ್ನು ಮೋದಿಗೆ ಶಕ್ತಿ ತುಂಬಲು ಅಭ್ಯರ್ಥಿಗಳನ್ನು ಸಂಸತ್ಗೆ ಕಳಿಸಬೇಕು ಎನ್ನುವ ಉತ್ಸಾಹದಲ್ಲಿ ಕ್ಷೇತ್ರದ ಜನರಿದ್ದಾರೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ಬದಲಾವಣೆ ಪರಿಣಾಮ?:ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ನನಗೆ ಹೊಸತಲ್ಲ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಬರುವ ಯಶವಂತಪುರ ವಿಧಾನ ಸಭಾ ಕ್ಷೇತ್ರದಿಂದ ಶಾಸಕಿಯಾಗಿ, ಸಚಿವೆಯಾಗಿಯೂ ಕೆಲಸ ಮಾಡಿದ್ದೇನೆ. ಕಳೆದ 30 ವರ್ಷದಿಂದ ನಾನು ಪೂರ್ಣ ಕಾಲಿಕ ಕಾರ್ಯಕರ್ತೆಯಾಗಿ ಈ ಭಾಗದಲ್ಲಿ ಸಂಚಾರ ಮಾಡಿದ್ದೇನೆ. ನನಗೆ ಈ ಲೋಕಸಭಾ ಕ್ಷೇತ್ರದ ಪರಿಚಯ ಇದೆ. ಹಾಗಾಗಿ ಕಾರ್ಯಕರ್ತರು ಕೂಡ ನನ್ನನ್ನು ಒಪ್ಪಿಕೊಂಡಿದ್ದಾರೆ. ಎಲ್ಲ ಕಡೆ ಓಡಾಡುತ್ತಿದ್ದೇವೆ. ಆದರೂ ಹೋಗಿರದ ಕೆಲವು ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಅಲ್ಲಿನ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಆ ಸಮಸ್ಯೆಗಳಲ್ಲಿ ಕೇಂದ್ರದಿಂದ ಯಾವುದನ್ನು ಮಾಡಿ ಪರಿಹರಿಸಬಹುದೋ ಅದನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.