ಹಾವೇರಿ: ಶಿಷ್ಯ ಶಿಶುನಾಳ ಷರೀಫ್ ಸಮಾಧಿ ಹಾಗೂ ಗುರು ಗೋವಿಂದ ಭಟ್ ಅವರ ದೇವಸ್ಥಾನವಿರುವ ಸ್ಥಳ ಈಗ ಹಿಂದೂ ಮತ್ತು ಮುಸ್ಲಿಂ ಶ್ರದ್ಧಾಕೇಂದ್ರವಾಗಿ ಮಾರ್ಪಟ್ಟಿದೆ. ಎರಡೂ ಕೋಮಿನವರೂ ಇಲ್ಲಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುವ ಮೂಲಕ ಶಿಶುನಾಳ ಶರೀಫರ ಜನ್ಮಭೂಮಿ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.
ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮ ಸಂತ ಶಿಶುನಾಳ ಶರೀಫರ ಜನ್ಮಭೂಮಿ. ಕರ್ನಾಟಕದ ಕಬೀರ ಎಂದೇ ಕರೆಯಲ್ಪಡುವ ಶಿಶುನಾಳ ಶರೀಫರು ತತ್ವಜ್ಞಾನಿಯಾಗಿ ಜಾನಪದ ಗಾರುಡಿಗನಾಗಿ ಸಮಾಜಸೇವಕನಾಗಿ ಚಿರಪರಚಿತರು. ಶಿಶುನಾಳ ಶರೀಫರು ಮುಸ್ಲಿಂರಾದರೆ ಅವರ ಗುರುಗಳಾದ ಗೋವಿಂದ ಭಟ್ ಹಿಂದೂ. ಗುರು ಶಿಷ್ಯರು ಮಾದರಿ ಗುರುಶಿಷ್ಯರಾಗಿರದೇ ಇಡೀ ವಿಶ್ವಕ್ಕೆ ಕೋಮು ಸಾಮರಸ್ಯದ ಸಂದೇಶ ಸಾರಿದವರು. ಇವರ ಬದುಕು, ಕೃತಿಗಳು ಸಂದೇಶಗಳಲ್ಲಿ ಕೋಮು ಸಾಮರಸ್ಯ ಅನುರಣಿಸುತ್ತವೆ.
ಶರೀಫಗಿರಿಯಲ್ಲಿ ಶಿಶುನಾಳ ಶರೀಫರ ಸಮಾಧಿ:ಶಿಶುನಾಳದ ಸಮೀಪ ಇರುವ ಶರೀಫಗಿರಿಯಲ್ಲಿ ಶಿಶುನಾಳ ಶರೀಫರ ಸಮಾಧಿ ಇದೆ. ಜೊತೆಗೆ ಅವರ ತಂದೆ ತಾಯಿಯ ಸಮಾಧಿಯೂ ಇದೆ. ಇದರ ಕೂಗಳತೆಯ ದೂರದಲ್ಲಿ ಗೋವಿಂದ ಭಟ್ ಅವರ ದೇವಸ್ಥಾನವಿದೆ. ಶಿಶುನಾಳ ಶರೀಫರು ನೆಟ್ಟಿದ್ದ ಬೇವಿನಮರದ ಕೆಳಗೆ ಶರೀಫರ ಸಮಾಧಿ ಇದ್ದು, ಇಲ್ಲಿಯೇ ಗುರು ಗೋವಿಂದ ಭಟ್ ಮತ್ತು ಶರೀಫರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಹಿಂದೂಗಳು ಶಿಶುನಾಳ ಶರೀಫ ಮತ್ತು ಗೋವಿಂದ ಭಟ್ ಅವರ ಮೂರ್ತಿಗೆ ಪೂಜೆ ಸಲ್ಲಿಸಿ ಹಣ್ಣುಕಾಯಿ ನೈವೇದ್ಯ ಅರ್ಪಿಸುತ್ತಾರೆ. ನಂತರ ಶರೀಫರ ಸಮಾಧಿಗೆ ತಲೆಬಾಗಿ ನಮಿಸಿ ಗೋವಿಂದ ಭಟ್ ಅವರ ದೇವಸ್ಥಾನಕ್ಕೆ ತೆರಳುತ್ತಾರೆ.