ಕರ್ನಾಟಕ

karnataka

ETV Bharat / state

ಶಿರೂರು ಗುಡ್ಡ ಕುಸಿತ ಪ್ರಕರಣ: ನಾಪತ್ತೆಯಾದ ತಂದೆಯನ್ನು ಹುಡುಕಿಕೊಡುವಂತೆ ಹೆಣ್ಣು ಮಕ್ಕಳ ಮನವಿ - Shiruru Hill Collapse - SHIRURU HILL COLLAPSE

ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಮೂವರು ಇನ್ನೂ ನಾಪತ್ತೆಯಾಗಿದ್ದಾರೆ. ಕಾಣೆಯಾದ ತಮ್ಮ ತಂದೆಯನ್ನು ಬೇಗ ಹುಡುಕಿಕೊಡುವಂತೆ ಹೆಣ್ಣು ಮಕ್ಕಳು ಮನವಿ ಮಾಡಿದ್ದಾರೆ.

OPERATION IS GOING SLOW  HD KUMARASWAMY VISIT SHIRURU  UTTARA KANNADA
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಜಗನ್ನಾಥ ಎಂಬವರ ಮೂವರು ಹೆಣ್ಣುಮಕ್ಕಳು (ETV Bharat)

By ETV Bharat Karnataka Team

Published : Jul 21, 2024, 6:59 AM IST

ಶಿರೂರು ಗುಡ್ಡ ಕುಸಿತ ಪ್ರಕರಣ (ETV Bharat)

ಕಾರವಾರ(ಉತ್ತರ ಕನ್ನಡ):ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ನಾಪತ್ತೆಯಾದ ಜಗನ್ನಾಥ ಎಂಬವರ ಮೂವರು ಹೆಣ್ಣು ಮಕ್ಕಳು ತಮ್ಮ ತಂದೆಯನ್ನು ಹುಡುಕಿಕೊಡುವಂತೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರೆದುರು ಮನವಿ ಮಾಡಿದರು.

ಶನಿವಾರ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಕುಮಟಾದ ಕೃತಿಕಾ, ಪಲ್ಲವಿ ಹಾಗೂ ಮನಿಷಾ ಮಾತನಾಡುತ್ತಾ, ನಮ್ಮ ತಂದೆ ಇಲ್ಲಿ ಹೊಟೇಲ್‌ನಲ್ಲಿ ಕೆಲಸ ಮಾಡಿ ಮನೆ ನಿರ್ವಹಿಸುತ್ತಿದ್ದರು. ಅವರು ನಾಪತ್ತೆಯಾಗಿ ಐದು ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ನಮ್ಮ ತಾಯಿಯೂ ಅನಾರೋಗ್ಯಕ್ಕೊಳಗಾಗಿದ್ದಾರೆ. ದಯಮಾಡಿ ತಂದೆಯನ್ನು ಬೇಗ ಹುಡುಕಿಕೊಡಿ ಎಂದರು.

ಸ್ಥಳೀಯರು ಹಾಗೂ ಪಕ್ಷದ ಕಾರ್ಯಕರ್ತರು ಹೆಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡುತ್ತಾ, ಕುಟುಂಬದ ಜವಾಬ್ದಾರಿ ಹೊತ್ತಿದ್ದ ಜಗನ್ನಾಥ ಅವರು ನಾಪತ್ತೆಯಾಗಿರುವುದರಿಂದ ಕುಟುಂಬ ಸಂಕಷ್ಟದಲ್ಲಿದೆ. ಅವರ ಬದುಕಿಗೆ ಅನುಕೂಲವಾಗುವಂತೆ ಹೆಣ್ಣುಮಕ್ಕಳಿಗೆ ಉದ್ಯೋಗ ಕೊಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತ್ವರಿತಗತಿಯ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಇದೇ ವೇಳೆ, ಉದ್ಯೋಗ ಕೊಡಿಸುವ ಬಗ್ಗೆಯೂ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಸಾಂತ್ವನ ಹೇಳಿದರು.

ಮಂದಗತಿಯ ಶೋಧ ಕಾರ್ಯಾಚರಣೆಗೆ ಆಕ್ಷೇಪ:ಲಾರಿ ಚಾಲಕ ಅರ್ಜುನ್ ಹಾಗೂ ಇತರರು ನಾಪತ್ತೆಯಾಗಿ ಐದು ದಿನ ಕಳೆದಿದೆ. ಕಾರ್ಯಾಚರಣೆ ವೇಗವಾಗಿ ನಡೆಯುತ್ತಿಲ್ಲ. ಕೇರಳದಿಂದ ಲಾರಿ ಹುಡುಕಲು ತಜ್ಞರ ತಂಡ ಶನಿವಾರ ಬೆಳಗ್ಗೆ ಬಂದಿದ್ದು, ಸಂಜೆಯವರೆಗೂ ಸ್ಥಳಕ್ಕೆ ತೆರಳಲು ಅನುಮತಿ ನೀಡಿಲ್ಲ. ಇದನ್ನು ನಾವು ಪ್ರಶ್ನಿಸಿದರೆ ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ. ಇಷ್ಟೊಂದು ನಿರ್ಲಕ್ಷ್ಯದ ಕಾರ್ಯಾಚರಣೆ ಎಲ್ಲಿಯೂ ಆಗದು. ಕೂಡಲೇ ಎಸ್ಪಿ ಅವರನ್ನು ಅಮಾನತು ಮಾಡಬೇಕು. ಇಲ್ಲಿ ಕೇವಲ ಸಚಿವರು, ಶಾಸಕರು ಬಂದಾಗ ಮಾತ್ರ ವೇಗವಾಗಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಲಾರಿ ಚಾಲಕ ಮುನಾಫ್ ಎಂಬವರು ಸಚಿವ ಮಂಕಾಳ್ ವೈದ್ಯ ಅವರೆದುರು ಆಕ್ಷೇಪ ವ್ಯಕ್ತಪಡಿಸಿದರು.

ಘಟನಾ ಸ್ಥಳದಲ್ಲಿ ನಾಪತ್ತೆಯಾಗಿರುವ ಲಾರಿ ಚಾಲಕ ಅರ್ಜುನ್ ಎಂಬವರ ಮೊಬೈಲ್ ರಿಂಗ್ ಆಗಿದೆ. ಆದರೆ ಕಾರ್ಯಾಚರಣೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪಗಳ ನಡುವೆ ಕೇರಳದ ಹಲವು ಮಾಧ್ಯಮಗಳು ಕೂಡ ಶಿರೂರಿಗೆ ಆಗಮಿಸಿ ದಿನವಿಡೀ ಸುದ್ದಿ ಬಿತ್ತರಿಸುತ್ತಿದ್ದವು. ಅರ್ಜುನ್ ಪತ್ನಿ ಕರೆ ಮಾಡಿದಾಗ ಮೊಬೈಲ್ ರಿಂಗಣಿಸಿದೆ. ಮೊದಲು ಸ್ವಿಚ್ ಆಫ್ ಇದ್ದ ಮೊಬೈಲ್ ಬಳಿಕ ರಿಂಗ್ ಆಗಿದ್ದು ಅರ್ಜುನ್ ಬದುಕಿರುವ ಸಾಧ್ಯತೆ ಇದೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯಲ್ಲಿ ತ್ವರಿತಗತಿಯ ಕಾರ್ಯಾಚರಣೆ ನಡೆಯುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಗುಡ್ಡ ಕುಸಿತವಾದರೂ ಕೇವಲ ನಾಲ್ಕೈದು ಜೆಸಿಬಿಯಿಂದ ಮಾತ್ರ ಕಾರ್ಯಾಚರಣೆ ಮಾಡಲಾಗುತ್ತಿದೆ. ನಾಪತ್ತೆಯಾದವರ ಹುಡುಕಾಟಕ್ಕೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಶಿರೂರು ಭೂಕುಸಿತ: ಕೇರಳದ ಅರ್ಜುನ್‌ಗಾಗಿ ಹುಡುಕಾಟ ಪುನಾರಂಭ: ನಿಧಾನ ಕಾರ್ಯಾಚರಣೆಗೆ ಅಸಮಾಧಾನ - Shiruru Hill Landslide

ABOUT THE AUTHOR

...view details