ಕಾರವಾರ (ಉತ್ತರ ಕನ್ನಡ):ಜಿಲ್ಲೆಯ ಶಿರೂರು ಗುಡ್ಡ ಕುಸಿತ ಪ್ರದೇಶದ ನದಿ ದಡದಲ್ಲಿಯೂ ಬಹುತೇಕ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ನಾಪತ್ತೆಯಾದ ಮೂವರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇದರ ನಡುವೆ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಕಾರ್ಯಾಚರಣೆ ಅಡ್ಡಿಯಾಗಿದ್ದು, ಶನಿವಾರ ಗೋವಾದಿಂದ ಆಗಮಿಸಲಿರುವ ಫ್ಲೋಟಿಂಗ್ ಪ್ಲಾಟ್‌ಫಾರಂನೊಂದಿಗೆ ಕಾರ್ಯಾಚರಣೆ ಮುಂದುವರಿಸಲು ನಿರ್ಧರಿಸಲಾಗಿದೆ.
ಶಿರೂರು ಗುಡ್ಡ ಕುಸಿತದಿಂದಾಗಿ ನಾಪತ್ತೆಯಾಗಿರುವವರಿಗಾಗಿ 11ನೇ ದಿನದ ಕಾರ್ಯಾಚರಣೆ ಅಂತ್ಯವಾಗಿದೆ. ಗಂಗಾವಳಿ ನದಿ ಹಾಗೂ ನದಿ ದಂಡೆಯಲ್ಲಿ ಜೆಸಿಬಿ ಹಾಗೂ ಲಾಂಗ್ ಆರ್ಮ್ ಬೂಮರ್ ಮೂಲಕ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ನದಿ ದಂಡೆಯ ಬಳಿ ಕಾರ್ಯಾಚರಣೆ ವೇಳೆ ಹೋಟೆಲ್‌ನ ಕೆಲ ಪಾತ್ರೆಗಳು, ನದಿ ದಂಡೆಯ ಮೇಲಿದ್ದ ಮರದ ತುಂಡುಗಳು ಪತ್ತೆಯಾಗಿದೆ. ಉಳಿದಂತೆ ಯಾವುದೇ ಸುಳಿವು ಪತ್ತೆಯಾಗಿಲ್ಲ.
ಸುರಕ್ಷತೆ ಖಚಿತಗೊಂಡ ಬಳಿಕ ಸಂಚಾರಕ್ಕೆ ಅವಕಾಶ - ಡಿಸಿ:ಕಾರ್ಯಾಚರಣೆ ಬಗ್ಗೆ ವಿವರಿಸಿರುವ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಮಳೆಯಿಂದಾಗಿ ನದಿಯಲ್ಲಿ ಅಡ್ವಾನ್ಸ್ಡ್ ಡ್ರೋನ್ ಬೇಸ್ಡ್ ಇಂಟಲಿಜೆಂಟ್ ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಮೂಲಕ ನಡೆಯಬೇಕಿದ್ದ ಸ್ಕ್ಯಾನಿಂಗ್ ಶುಕ್ರವಾರ ಮಧ್ಯಾಹ್ನ ಪೂರ್ಣಗೊಂಡಿದೆ. ನದಿಯಲ್ಲಿ ಹುಡುಕಬೇಕಾದ ಜಾಗ ಗುರುತಿಸಲಾಗಿದೆ. ಆದರೆ, ಇದೀಗ ನದಿಯಲ್ಲಿ ಡೈವಿಂಗ್ ಮಾಡಿಯೇ ಪರಿಶೀಲಿಸಬೇಕಿದೆ. ಸದ್ಯ ನದಿಯ ಹರಿವಿನ ವೇಗ 6 ನಾಟ್ಸ್ ಇದೆ. ಪ್ರತಿ ಎರಡು ಮೂರು ಗಂಟೆಗೊಮ್ಮೆ ನೌಕಾನೆಲೆಯವರು ಪರಿಶೀಲನೆ ನಡೆಸುತ್ತಿದ್ದು, ಶಾಸಕರ ಸೂಚನೆಯಂತೆ ಫ್ಲೋಟಿಂಗ್ ಪ್ಲಾಟ್‌ಫಾರಂ ತಂದು ಶನಿವಾರ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಗುಡ್ಡಕುಸಿದ ಸ್ಥಳದಲ್ಲಿ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧ್ಯಯನ ನಡೆಸಿದೆ. ಈ ಪ್ರದೇಶದಲ್ಲಿ ಮತ್ತೆ ಅವಘಡಗಳು ಆಗದಂತೆ ಮತ್ತು ಸಂಚಾರಕ್ಕೆ ಅನುವು ಮಾಡಿಕೊಡಲು ಕೆಲ ಅಗತ್ಯ ಕ್ರಮಕ್ಕೆ ಸೂಚಿಸಿದ್ದು, ಅದರಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಬಳಿಕ ಹೆದ್ದಾರಿಯಲ್ಲಿ ಸಂಚಾರ ಸುರಕ್ಷಿತ ಎಂದು ಖಚಿತಗೊಂಡ ಬಳಿಕ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಕಾರ್ಯಾಚರಣೆ ಬಂದ್ ಮಾಡಲ್ಲ - ಸೈಲ್:ಗುಡ್ಡದ ಬಳಿ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದೆ ಎಂದು ಸುದ್ದಿ ಹರಡಲಾಗುತ್ತದೆ. ಆದರೆ, ಕಾರ್ಯಾಚರಣೆ ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಹೆದ್ದಾರಿ ಹಾಗೂ ನದಿ ದಂಡೆಯ ಮೇಲೆ ಬಹುತೇಕ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಇನ್ಮುಂದೆ ಕೇವಲ ನದಿಯಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಶಾಸಕ ಸತೀಶ್ ಸೈಲ್ ಸ್ಪಷ್ಪಪಡಿಸಿದರು.
ಗುಡ್ಡ ಕುಸಿತದಲ್ಲಿ ಇನ್ನೂ ಮೂರು ಜನ ಕಣ್ಮರೆಯಾಗಿದ್ದಾರೆ. ಮೃತರಿಗೆ ತಾರತಮ್ಯ ಮಾಡದೇ ಪ್ರತಿಯೊಬ್ಬರಿಗೆ 5 ಲಕ್ಷದಂತೆ ಪರಿಹಾರ ನೀಡಲಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಕಾರಣ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ನದಿಯ ವೇಗ ಹೆಚ್ಚಿದ್ದಾಗ ಪ್ರಯತ್ನ ಮಾಡಿದರೆ ಇನ್ನೊಬ್ಬರ ಜೀವಕ್ಕೆ ಅಪಾಯವಾಗಬಹುದು. ಹೀಗಾಗಿ ಫ್ಲೋಟಿಂಗ್ ಪ್ಲಾಟ್‌ಫಾರಂ ಅನ್ನು ತರಿಸಲಾಗುತ್ತಿದೆ. ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ತೋರಿಸಿದ ಸ್ಥಳದಲ್ಲಿ ಪ್ಲಾಟ್‌ಫಾರಂ ಬಳಸುತ್ತೇವೆ. ಸ್ಥಳೀಯ ಮೀನುಗಾರರಿಂದಲೂ ನದಿಯ ಕುರಿತು ಮಾಹಿತಿ ಪಡೆಯುತ್ತಿದ್ದೇವೆ ಎಂದು ವಿವರಿಸಿದರು.