ಸಚಿವ ಮಂಕಾಳು ವೈದ್ಯ ಮಾತನಾಡಿದರು. (ETV Bharat) ಮಂಗಳೂರು:''ಶಿರೂರು ದುರಂತಕ್ಕೆ ಐಆರ್‌ಬಿ ಹಾಗೂ ಕೇಂದ್ರದ ಬಿಜೆಪಿ ಸರಕಾರ ನೇರ ಹೊಣೆಯಾಗಿದೆ, ಇದು ಎಲ್ಲರಿಗೂ ಗೊತ್ತಿದೆ'' ಎಂದು ರಾಜ್ಯ ಮೀನುಗಾರಿಕಾ ಸಚಿವ ಮಂಕಾಳು ವೈದ್ಯ ಆರೋಪ ಮಾಡಿದ್ದಾರೆ.
ನಗರದಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ''ರಾಜ್ಯ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಏನು ಮಾಡಬೇಕು ಅದನ್ನು ಮಾಡಿದೆ. ಮುಖ್ಯಮಂತ್ರಿ, ಕಂದಾಯ ಸಚಿವರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ. ಐಆರ್‌ಬಿಗೆ 11 ವರ್ಷಗಳಿಂದ ಈ ರಸ್ತೆಯನ್ನು ಪೂರ್ತಿ ಮಾಡಲಾಗಲಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದ ಈ ರೀತಿಯ ದುರಂತ ಸಂಭವಿಸಿದೆ '' ಎಂದು ಕಿಡಿಕಾರಿದರು.
''ಕೇಂದ್ರ ತಂಡ ಬಂದು ಇಲ್ಲಿಯೇ ಕುಸಿಯುತ್ತದೆ ಎಂದು ಹೇಳಿದರೂ ಐಆರ್‌ಬಿ ಏನೂ ಕ್ರಮ ಕೈಗೊಂಡಿಲ್ಲ. ಬೇರೆ ಬೇರೆ ರಾಜ್ಯದವರು ಸಾವನ್ನಪ್ಪಿದ್ದಾರೆ. ಅದರ ಬಗ್ಗೆ ಮಾತಾಡುವವರು ಯಾರೂ ಇಲ್ಲ. ಐಆರ್‌ಬಿ ಬಳಿ ಅವರ ಯೋಗ್ಯತೆಗೆ ಒಂದು ಹಿಟಾಚಿ ಕೂಡ ಇಲ್ಲ. ಅದನ್ನು ನಾವು ಬೇರೆ ಕಡೆಯಿಂದ ತರಿಸಿದ್ದೇವೆ. ಅವೈಜ್ಞಾನಿಕ ಕಾಮಗಾರಿ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇವೆ. ಐಆರ್‌ಬಿ ಕಂಪನಿಯ ಮೇಲೆ ಎಫ್ಐಆರ್ ದಾಖಲಿಸಿದ್ದೇವೆ. ಅರಣ್ಯ ಇಲಾಖೆಯಿಂದಲೂ ಎಫ್ಐಆರ್ ಆಗಿದೆ. ಏನೇ ಮಾಡಿದ್ರೂ ಐಆರ್‌ಬಿ ಮೂಲ ಬಿಜೆಪಿ. ಅವರು ಅದನ್ನು ಹೊರತುಪಡಿಸಿ ರಾಜಕಾರಣ ಮಾಡುತ್ತಿದ್ದಾರೆ. ಮೊದಲು ಅದನ್ನು ಸರಿ ಮಾಡಲಿ'' ಎಂದು ಗರಂ ಆದರು.
''ನಾವು ರಾಜಕಾರಣ ಮಾಡಲ್ಲ. ಪಾಪದ ಜನರಿಗೆ ಸಹಾಯ ಮಾಡಿದ್ದೇವೆ. ಅಲ್ಲಿನ ಸಂಸದರ ಬಗ್ಗೆ ಮಾತನಾಡಿದರೆ ಬೇಕಾದಷ್ಟಿದೆ. ಜಿಲ್ಲೆಯವರಾದ ಅವರು, ಮೊದಲು ಶಾಸಕರಾಗಿದ್ದವರು, ಮಂತ್ರಿಯಾಗಿದ್ದವರು. ಎನ್ಎಚ್‌ಎಐ ಹಾಗೂ ಐಆರ್‌ಬಿ ಯಾರಿಗೆ ಬರುತ್ತೆ ಅಂತ ಅವರಿಗೆ ಗೊತ್ತಿದೆ. ಎಷ್ಟೊಂದು ಮಂದಿ ಸಾಯುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ವಾ? ಬಿಜೆಪಿಯವರು ಯಾರು ಸಾಯುತ್ತಾರೆ ನೋಡುತ್ತಿರುತ್ತಾರೆ. ಸತ್ತವರ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಶವದ ಮೇಲೆ ರಾಜಕಾರಣ ಮಾಡುವುದು ಬಹಳ ದಿನ ನಡೆಯಲ್ಲ, ಇದು ಒಳ್ಳೆಯದಲ್ಲ'' ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಳೆಗಾಲದಲ್ಲಿ ಯಾರಾದ್ರು ಸಾವನ್ನಪ್ಪಿದ್ರೆ ಈ ಗ್ರಾಮದಲ್ಲಿ ಆತಂಕ; ತುಂಗಭದ್ರಾ ನದಿಯಲ್ಲಿ ಶವ ಹೊತ್ತು ಸಾಗೋದು ಕಷ್ಟ ಕಷ್ಟ! - Dead body Carried in River