ಕಾರವಾರ: ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ ನಾಪತ್ತೆಯಾದವರ ಪತ್ತೆಗೆ ಪಟ್ಟು ಹಿಡಿದು ನಿರಂತರ ಶ್ರಮವಹಿಸುತ್ತಿರುವ ಶಾಸಕ ಸತೀಶ್ ಸೈಲ್ ಇದೀಗ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣನ್ನು ತೆರವು ಮಾಡಿ ಹುಡುಕಾಟ ನಡೆಸಲು ಕೇರಳದ ತ್ರಿಶೂರದಿಂದ ಅಗ್ರೋ ಡ್ರೆಜ್ ಕ್ರಾಫ್ಟ್ ಯಂತ್ರವನ್ನು ತರಿಸಲು ಮುಂದಾಗಿದ್ದಾರೆ.
ಹೌದು, ಶಿರೂರು ಬಳಿ ಕುಸಿದ ಬೃಹತ್ ಗುಡ್ಡದ ಮಣ್ಣು ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿದ್ದರಿಂದ ಇವರೆಗಿನ ಕಾರ್ಯಾಚರಣೆಗೆ ಸಾಕಷ್ಟು ಅಡ್ಡಿಯಾಗಿದೆ. ಮಾತ್ರವಲ್ಲದೆ ನಾಪತ್ತೆಯಾದ ಮೂವರಿಗಾಗಿ ನದಿ ದಡ ಹಾಗೂ ಹೆದ್ದಾರಿಯ ಮಣ್ಣಿನಡಿ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಇದೀಗ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣಿನಲ್ಲಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕಾರಣದಿಂದ ಅಲ್ಲಿಯೂ ಹುಡುಕಾಟಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಸತೀಶ್ ಸೈಲ್ ಪ್ರಯತ್ನ ಮುಂದುವರಿಸಿದ್ದಾರೆ.
ಈ ಸಂಬಧ ಶಾಸಕ ಸತೀಶ್ ಸೈಲ್ ಅವರೊಂದಿಗೆ ಕೆರಳದ ತ್ರಿಶೂರ್ ಕೃಷಿ ಇಲಾಖೆ ಉಪನಿರ್ದೇಶಕ ವಿಬಿನ್.ಸಿ ನೇತೃತ್ವದ ಮೂವರ ತಜ್ಞರ ತಂಡ ಗಂಗಾವಳಿ ನದಿ ಬಳಿ ಮಂಗಳವಾರ ಪರಿಶೀಲನೆ ನಡೆಸಿದೆ. ಈ ವೇಳೆ ಶಾಸಕ ಸತೀಶ್ ಸೈಲ್ ಗುಡ್ಡ ಕುಸಿತದಿಂದ ನಾಪತ್ತೆಯಾಗಿರುವ ಲಾರಿ ಹಾಗೂ ಇತರೆ ವಸ್ತುಗಳು ಇರಬಹುದಾದ ಜಾಗದ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣು ಹಾಗೂ ಮರಗಳನ್ನು ಯಂತ್ರದಿಂದ ತೆರವು ಮಾಡಿದಲ್ಲಿ ಕಾರ್ಯಾಚರಣೆಗೆ ಸಹಕಾರಿಯಾಗುವ ಬಗ್ಗೆ ತಿಳಿಸಿದರು. ಇದೇ ವೇಳೆ ಆಗಮಿಸಿದ ಡ್ರೆಜ್ಜಿಂಗ್ ಯಂತ್ರದ ಆಫರೇಟರ್‌ಗಳು ಯಂತ್ರ ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ತ್ರಿಶೂರ್‌ನ ಕೃಷಿ ಇಲಾಖೆಯ ಉಪನಿರ್ದೇಶಕ ವಿಬಿನ್.ಸಿ, ಗಂಗಾವಳಿ ನದಿಯಲ್ಲಿ ಅಗ್ರೋ ಡ್ರೆಜ್ ಕ್ರಾಫ್ಟ್ ಯಂತ್ರ ಬಳಕೆಯ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿ ನದಿ ಹರಿವು, ಆಳದ ಮಾಹಿತಿ ಪಡೆದುಕೊಂಡಿದ್ದೇವೆ. ಗಂಗಾವಳಿ ನದಿಯಲ್ಲಿ ಯಂತ್ರದ ಕಾರ್ಯಾಚರಣೆ ಕುರಿತು ಸಾಧ್ಯತೆ ಪರಿಶೀಲನೆ ಮಾಡಲಾಗಿದೆ. ನಮ್ಮಲ್ಲಿರುವ ಡ್ರೆಜ್ಜಿಂಗ್ ಯಂತ್ರ 6 ಮೀಟರ್ ಆಳದವರೆಗಿನ ನೀರಿನಲ್ಲಿ ನಿಲ್ಲುವ ಸಾಮರ್ಥ್ಯವಿರುವ ಬಗ್ಗೆ ಯಂತ್ರದ ಆಫರೇಟರ್‌ಗಳು ಮಾಹಿತಿ ನೀಡಿದ್ದಾರೆ. ನಾವು ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುತ್ತೇವೆ ಎಂದರು.