ಕರ್ನಾಟಕ

karnataka

ETV Bharat / state

ಬೆಳಗಾವಿಯಲ್ಲಿ ಶೀಗಿಹುಣ್ಣಿಮೆ: ಭೂಮಿತಾಯಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ - SHEEGI HUNNIME

ಬೆಳಗಾವಿಯಲ್ಲಿ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಉಡಿ ತುಂಬುವ ಮೂಲಕ ಶೀಗಿಹುಣ್ಣಿಮೆ ಆಚರಿಸಿದರು.

sheegi-hunnime-celebrated-by-farmers-in-belagavi
ಶೀಗೆ ಹುಣ್ಣಿಮೆ ಖುಷಿಯಲ್ಲಿ ಮುಸ್ಲಿಂ ಕುಟುಂಬ (ETV Bharat)

By ETV Bharat Karnataka Team

Published : Oct 17, 2024, 9:39 PM IST

ಬೆಳಗಾವಿ: ಜಿಲ್ಲೆಯಾದ್ಯಂತ ಮಳೆಯ ನಡುವೆಯೂ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಉಡಿ ತುಂಬಿಸಿ ರೈತರು ಶೀಗಿಹುಣ್ಣಿಮೆ ಆಚರಿಸಿದರು. ಮುಸ್ಲಿಂ ರೈತ ಕುಟುಂಬವೂ ಕೂಡ ಭೂಮಿ ತಾಯಿಗೆ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಉತ್ತರ ಕರ್ನಾಟಕದ ಪ್ರಮುಖ ಹಬ್ಬಗಳಲ್ಲಿ ಶೀಗಿಹುಣ್ಣಿಮೆ ಪ್ರಮುಖವಾದುದು. ಇಂದು ಭೂತಾಯಿಗೆ ಭಕ್ತಿಯಿಂದ ಪೂಜೆ ಮಾಡಿ, ಚರಗ ಚೆಲ್ಲಿದ ರೈತರು ನಾಡಿಗೆ ಒಳಿತು ಮಾಡು ತಾಯಿ ಎಂದು ಪ್ರಾರ್ಥಿಸಿದರು.

ಶೀಗಿಹುಣ್ಣಿಮೆ ಸಂಭ್ರಮದಲ್ಲಿ ಹೊಲದಲ್ಲಿ ಒಟ್ಟಿಗೆ ಕುಳಿತು ಊಟ ಮಾಡಿದ ರೈತ ಕುಟುಂಬ (ETV Bharat)

ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲನ್ನು ಪೂಜಿಸಿ, ಹಸಿರು ಸೀರೆಯುಟ್ಟ ಭೂ ತಾಯಿಯನ್ನು ಆರಾಧಿಸುವ ಶುಭ ಘಳಿಗೆಯೇ ಶೀಗಿಹುಣ್ಣಿಮೆ. ರೈತರು ತಮ್ಮ ಕುಟುಂಬದ ಸದಸ್ಯರು, ಸ್ನೇಹಿತರೊಂದಿಗೆ ತಮ್ಮ ಕೃಷಿ ಭೂಮಿ ಭೂಮಿತಾಯಿ ಜೊತೆಗೆ ಪಂಚ ಪಾಂಡವರನ್ನು ಸ್ಥಾಪಿಸಿ, ಪೂಜೆ ಸಲ್ಲಿಸಿದ್ದಾರೆ.

ಭೂತಾಯಿಯ ಸೀಮಂತ ಕಾರ್ಯಕ್ಕೆ ಹುರಕ್ಕಿ ಹೋಳಿಗೆ, ಚಪಾತಿ, ಜೋಳದ ಕಡುಬು, ವಡೆ, ಮೊಸರು, ಪುಂಡಿಪಲ್ಯೆ, ಕಾಳು ಪಲ್ಯೆ, ಮೆಣಸಿನಕಾಯಿ, ಚಟ್ನಿ, ಮೊಸರು, ಶೇಂಗಾಚಟ್ನಿ, ಕುಂಬಳ ಪಲ್ಯೆ, ಬದನೆ ಪಲ್ಯೆ, ಚವಳಿ ಪಲ್ಯೆ, ಅನ್ನದ ಬಾನ, ಮಡಿಕೆಕಾಳು ಪಲ್ಯೆ, ಕಿಚಡಿ ತಯಾರಿಸಿ ಎಡೆ ಹಿಡಿದು ಚರಗ ಚೆಲ್ಲುವುದು ಹಬ್ಬದ ವಿಶೇಷ.

ಗ್ರಾಮೀಣ ಭಾಗದ ಕೆಲವೆಡೆ ಶೀಗಿ ಹುಣ್ಣಿಮೆಯನ್ನು ಹಿಂದೂ‍, ಮುಸ್ಲಿಮರು ಒಟ್ಟಾಗಿ ಆಚರಿಸುತ್ತಾರೆ. ಮಕ್ಕಳಿಗಂತೂ ಶೀಗಿಹುಣ್ಣಿಮೆ ಎಂದರೆ ಸಂಭ್ರಮ. ಅವರು ಹೊಲದಲ್ಲಿ ಗಾಳಿಪಟ ಹಾರಿಸಿ ಖುಷಿಪಡುತ್ತಾರೆ. ಆದರೂ ಈಗೆಲ್ಲಾ ಮೊದಲಿನ ಸಂಭ್ರಮವಿಲ್ಲ.

ಶೀಗಿಹುಣ್ಣಿಮೆ ಸಂಭ್ರಮ (ETV Bharat)

ರಾಮದುರ್ಗ ತಾಲೂಕಿನ ಎಂ.ಚಂದರಗಿ ಗ್ರಾಮದ ಫಕ್ರುಸಾಬ್ ನದಾಫ್ ಮತ್ತು ಕುಟುಂಬಸ್ಥರು ತಮ್ಮ ಜಮೀನಿನಲ್ಲಿ ಭೂಮಿತಾಯಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿ ಶೀಗಿಹುಣ್ಣಿಮೆ ಆಚರಿಸಿದರು. ಈ ಮೂಲಕ ಶೀಗಿಹುಣ್ಣಿಮಿ ಎಲ್ಲ ಮಣ್ಣಿನ ಮಕ್ಕಳ ಹಬ್ಬ ಎಂಬುದನ್ನು ತೋರಿಸಿದರು.

ಕಳೆದೊಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಶೀಗಿ ಹುಣ್ಣಿಮೆ ಹಬ್ಬಕ್ಕೆ ಅಷ್ಟೊಂದು ಉತ್ಸಾಹ ಕಂಡುಬರಲಿಲ್ಲ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರೈತರು ತಮ್ಮ ಜಮೀನಿಗೆ ಹೋಗಲಾಗದೆ ಪರದಾಡಿದರು. ಈ ಹಿನ್ನೆಲೆಯಲ್ಲಿ ರೈತರು ರಸ್ತೆ ಪಕ್ಕದಲ್ಲಿ ಐದು ಮಂದಿ ಪಾಂಡವರನ್ನಿಟ್ಟು ಚರಗ ಚೆಲ್ಲಿದರು. ಇನ್ನು ಕೆಲವರು ರಸ್ತೆ ಪಕ್ಕದಲ್ಲೇ ಇರುವ ಜಮೀನಿಗೆ ತೆರಳಿ ಚೆರಗ ಚೆಲ್ಲಿದ್ದಾರೆ.

ರೈತ ಕುಟುಂಬದಿಂದ ಶೀಗಿಹುಣ್ಣಿಮೆ ಪೂಜೆ (ETV Bharat)

ಯಲ್ಲಮ್ಮನಗುಡ್ಡಕ್ಕೆ ಭಕ್ತಸಾಗರ:ಯಲ್ಲಮ್ಮನಗುಡ್ಡದಲ್ಲಿ ಶೀಗಿ ಹುಣ್ಣಿಮೆ ಅಂಗವಾಗಿ ಗುರುವಾರ ನಡೆದ ಜಾತ್ರೆಗೆ ಭಕ್ತಸಾಗರವೇ ಹರಿದುಬಂದಿತ್ತು. ಗದಗ, ಕೊಪ್ಪಳ, ಬಾಗಲಕೋಟೆ, ರಾಯಚೂರು ಜಿಲ್ಲೆಗಳಿಂದ ಏಕಕಾಲಕ್ಕೆ ಸಾವಿರಾರು ವಾಹನ ಬಂದಿದ್ದರಿಂದ ಉಗರಗೋಳ-ಯಲ್ಲಮ್ಮನಗುಡ್ಡ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

ಗುಡ್ಡದಿಂದ ನಾಲ್ಕೈದು ಕಿ.ಮೀ ದೂರದವರೆಗೂ ವಾಹನ ಸಾಲುಗಟ್ಟಿ ನಿಂತಿದ್ದವು. ಇದರ ಮಧ್ಯೆ ಮಳೆಯೂ ಸುರಿದಿದ್ದದಿಂದ ಹಾಗೂ ಉಗರಗೋಳದಲ್ಲಿ ಹಳ್ಳದ ನೀರು ರಸ್ತೆಮೇಲೆ ಹರಿದಿದ್ದರಿಂದ ಭಕ್ತರು ಹೈರಾಣಾದರು‌. ಉಗರಗೋಳದ ಎಲ್ಲ ರಸ್ತೆಗಳಲ್ಲೂ ಟ್ರಾಫಿಕ್ ಮಿತಿಮೀರಿತ್ತು. ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರು ಹರಸಾಹಸಪಟ್ಟರು.

ಧಾರವಾಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು ರೈತರು ಹೊಲಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಜಮೀನಿನ ತುಂಬೆಲ್ಲ ನೀರು ನಿಂತುಕೊಂಡಿದ್ದು ಹೆಜ್ಜೆ ಇಡದ ಪರಿಸ್ಥಿತಿ ಇದೆ.

"ಪ್ರತೀ ವರ್ಷವೂ ಎತ್ತುಗಳನ್ನು ಅಲಂಕರಿಸಿ ಚಕ್ಕಡಿ, ಟ್ರಾಕ್ಟರ್​ಗಳೊಂದಿಗೆ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದೆವು. ಆದರೆ ಈ ವರ್ಷ ಮಳೆ ಆರ್ಭಟಕ್ಕೆ ಜಮೀನುಗಳಿಗೆ ಹೋಗಲಾಗದೇ ಶೀಗಿ ಹುಣ್ಣಿಮೆಯನ್ನು ಸರಳವಾಗಿ ಆಚರಿಸುತ್ತಿದ್ದೇವೆ" ಎಂದು ಕುಂದಗೋಳದ ರೈತ ಬಸವರಾಜ್ ಯೋಗಪ್ಪನವರ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ಇದನ್ನೂ ಓದಿ:ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ಸಂಭ್ರಮ: ಈ ಹಬ್ಬದ ವೈಶಿಷ್ಟ್ಯ ಗೊತ್ತೇ?

ABOUT THE AUTHOR

...view details