ದಾವಣಗೆರೆ:ಬೆಣ್ಣೆ ದೋಸೆ. ಇದು ದಾವಣಗೆರೆಯ ವಿಶಿಷ್ಟ ತಿಂಡಿ. ಇಂದಿಗೂ ಜನಸಾಮಾನ್ಯರು, ರಾಜಕೀಯ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿಗೆ ದಾವಣಗೆರೆ ಬೆಣ್ಣೆ ದೋಸೆ ಅಂದ್ರೆ ಅಚ್ಚುಮೆಚ್ಚು. ದಾವಣಗೆರೆಗೆ ಯಾರೇ ಭೇಟಿ ಕೊಟ್ಟರೂ ಗರಿಗರಿಯಾದ ಬೆಣ್ಣೆ ದೋಸೆ ಸವಿಯದೆ ತಮ್ಮ ಊರುಗಳಿಗೆ ಹಿಂದಿರುಗಿದ್ದೇ ಇಲ್ಲಬಹುದೇನೋ. ಬೆಣ್ಣೆ ದೋಸೆ ದಾವಣಗೆರೆ ಜನರಿಗೆ ಪರಿಚಯವಾಗಿ 97 ವರ್ಷಗಳನ್ನು ಪೂರೈಸಿದೆ. ಸ್ವಾತಂತ್ರ್ಯಾಪೂರ್ವದಲ್ಲಿ ಆರಂಭವಾದ ದೋಸೆ ಮೇನಿಯಾ ಇಂದಿಗೂ ಅದೇ ಸ್ವಾದ ಉಳಿಸಿಕೊಂಡಿದೆ.
1928ರಲ್ಲಿ ಅಂದರೆ ಸ್ವಾತಂತ್ರ್ಯಾಪೂರ್ವದಲ್ಲಿ ಈ ತಿಂಡಿಯನ್ನು ದಾವಣಗೆರೆಗೆ ಪರಿಚಯಿಸಿದ ಕೀರ್ತಿ ಚೆನ್ನಮ್ಮಜ್ಜಿ ಅವರಿಗೆ ಸಲ್ಲುತ್ತದೆ. ಅಲ್ಲದೇ ಚೆನ್ನಮ್ಮ ಅಜ್ಜಿ ಬಳಿಕ ಬೆಣ್ಣೆ ದೋಸೆಯನ್ನು ಮತ್ತಷ್ಟು ಖ್ಯಾತಿ ಗಳಿಸಿದ್ದು ಪುತ್ರರಾದ ಶಾಂತಪ್ಪ ಹಾಗೂ ಮಹದೇವಪ್ಪ ಅವರು. ಇವರು ಆರಂಭಿಸಿದ ದೋಸೆ ಉದ್ಯಮದಿಂದಲೇ ದಾವಣಗೆರೆಗೆ 'ಬೆಣ್ಣೆ ನಗರಿ' ಎಂಬ ಗರಿ ದಕ್ಕಿದೆ.
1928ರಲ್ಲಿ ರಾಗಿ ಹಿಟ್ಟಿನಿಂದ ಬೆಣ್ಣೆ ದೋಸೆ ಪರಿಚಯವಾಗಿ ಇದೀಗ ಅಕ್ಕಿ ಹಿಟ್ಟಿನಿಂದ ತಯಾರಾಗುವ ದೋಸೆಯತನಕ 97 ವರ್ಷಗಳು ಕಳೆದಿವೆ. ಅಂದಿನಿಂದ ಇಂದಿನತನಕ ಚನ್ನಮ್ಮರ ಪುತ್ರರು ಒಂದೇ ಸ್ವಾದ ನೀಡ್ತಾ ಬಂದಿದ್ದಾರೆ. ಬಡವರ ಹೋಟೆಲ್ 'ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್'ನ ಮಾಲೀಕ ಹಾಗೂ ಚೆನ್ನಮ್ಮಜ್ಜಿಯ ಮೊಮ್ಮಗ ಗಣೇಶ್ ಅವರು ಇಂದಿಗೂ ರುಚಿಯಾದ ದೋಸೆಯನ್ನು ಉಣಬಡಿಸುತ್ತಿದ್ದಾರೆ.
ವಿಶಿಷ್ಟ ತಿಂಡಿ ಪರಿಚಯಿಸಿದ್ದ ಚೆನ್ನಮ್ಮಜ್ಜಿ: ಬೆಳಗಾವಿ ಜಿಲ್ಲೆಯ ಬೀಡ್ಕಿ ಗ್ರಾಮದ ನಿವಾಸಿಯಾಗಿರುವ ಚನ್ನಮ್ಮಜ್ಜಿ ಸ್ವಾತಂತ್ರ್ಯಪೂರ್ವದಲ್ಲಿ ಮೈಸೂರು ಸೀಮೆಯಾಗಿದ್ದ ದಾವಣಗೆರೆಗೆ ತನ್ನ ಮಕ್ಕಳೊಂದಿಗೆ ವಲಸೆ ಬಂದಿದ್ದರು. ಅಂದಿನ ದಾವಣಗೆರೆ ತಾಲೂಕಿನ ಆವರಗೆರೆ ಗ್ರಾಮದಲ್ಲಿ ನೆಲೆಸಿದ್ದರು.
1928ರಲ್ಲಿ ಚೆನ್ನಮ್ಮ ಅಜ್ಜಿ ದಾವಣಗೆರೆ ನಗರದ ವಸಂತ ಟಾಕೀಸ್ ಬಳಿಯ 'ಸಾವಳಗಿ ನಾಟಕ ಥಿಯೇಟರ್' ಬಳಿ ಪುಟ್ಟ ಉಪಹಾರ ಗೃಹ ಆರಂಭಿಸಿದರು. ಅಲ್ಲಿ ರಾಗಿ ಹಿಟ್ಟು ಬಳಸಿ ಬೆಣ್ಣೆ ದೋಸೆ, ಚಟ್ನಿ ಮತ್ತು ಆಲೂಗಡ್ಡೆ ಪಲ್ಯವನ್ನು ಉಣಬಡಿಸಲು ಆರಂಭಿಸಿದರು. ಅದು ಹಂತಹಂತವಾಗಿ ಖ್ಯಾತಿ ಗಳಿಸಿತು. 1938ರಲ್ಲಿ ಚೆನ್ನಮ್ಮಜ್ಜಿ ಮಕ್ಕಳಾದ ಶಾಂತಪ್ಪ ಹಾಗೂ ಮಹದೇವಪ್ಪ ಅಕ್ಕಿ ಹಿಟ್ಟಿನೊಂದಿಗೆ ದೋಸೆಯನ್ನು ತಯಾರಿಸಲು ಆರಂಭಿಸಿದ್ದರಿಂದ ದೋಸೆ ಮತ್ತಷ್ಟು ಖ್ಯಾತಿ ಗಳಿಸುವಂತೆ ಮಾಡಿದರು.
ಮರಳಿ ಊರು ಸೇರಿದ್ದ ಚನ್ನಮ್ಮಜ್ಜಿಯ ಇಬ್ಬರು ಮಕ್ಕಳು: ಚನ್ನಮ್ಮ ಅಜ್ಜಿಯ ನಾಲ್ಕು ಪುತ್ರರ ಪೈಕಿ ಬಸವಂತಪ್ಪ, ಶಂಕರಪ್ಪ ಎಂಬವರು ಮತ್ತೆ ತಮ್ಮ ಊರು ಬೆಳಗಾವಿ ಜಿಲ್ಲೆಯ ಬೀಡ್ಕಿ ಗ್ರಾಮಕ್ಕೆ ವಾಪಸಾದರು. ಉಳಿದ ಇಬ್ಬರು ಪುತ್ರರಾದ ಶಾಂತಪ್ಪ ಮತ್ತು ಮಹದೇವಪ್ಪ ಮಾತ್ರ ದಾವಣಗೆರೆ ಬಿಟ್ಟು ತೆರಳದೆ ಪ್ರತ್ಯೇಕವಾಗಿ ಎರಡು ಹೋಟೆಲ್ ತೆರೆದರು. 1944ರಲ್ಲಿ ಶಾಂತಪ್ಪ ದಾವಣಗೆರೆ ನಗರದ ಗಡಿಯಾರ ಕಂಬದ ಬಳಿ 'ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್' ಎಂಬ ಉಪಹಾರ ಗೃಹವನ್ನು ಆರಂಭಿಸಿದರು.
ಇಂದಿಗೂ ಈ ಹೋಟೆಲನ್ನು ನಾಲ್ಕನೇ ತಲೆಮಾರಿನವರು ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ಶಾಂತಪ್ಪನವರ ಪುತ್ರ ಗಣೇಶ್ 30 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ತಂದೆ ಶಾಂತಪ್ಪ 50 ವರ್ಷಗಳ ತನಕ ಹೋಟೆಲ್ ನಡೆಸಿದ್ದಾರೆ ಎಂದು ಪುತ್ರ ಗಣೇಶ್ ಮಾಹಿತಿ ನೀಡಿದರು.