ದಾವಣಗೆರೆ :ಲೋಕಸಭಾ ಚುನಾವಣೆ ಈ ಬಾರಿ ಶಾಮನೂರು ಶಿವಶಂಕರಪ್ಪ ಹಾಗೂ ಜಿ. ಎಂ ಸಿದ್ದೇಶ್ವರ್ ಪ್ರತಿಷ್ಠಿತ ಕುಟುಂಬಗಳ ನಡುವೆ ನಡೆದಿದೆ. ರೋಚಕ ಚುನಾವಣೆಗೆ ಇಂದು ಮತದಾನ ಕೂಡ ನಡೆದಿದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬ ಹಾಗೂ ಜಿ. ಎಂ ಸಿದ್ದೇಶ್ವರ್ ಅವರು ಕುಟುಂಬದ ಸಮೇತ ಬಂದು ಮತದಾನ ಮಾಡಿದ್ರು. ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ತಮ್ಮ ಪತಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಹಾಗೂ ಪುತ್ರಿ ಶ್ರೇಷ್ಠ ಶಾಮನೂರು, ಪುತ್ರ ಸಮರ್ಥ್ ಶಾಮನೂರು ಅವರೊಂದಿಗೆ ಆಗಮಿಸಿ, ಐಎಮ್ಎ ಹಾಲ್ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.
ಮತದಾನ ಮಾಡಿದ ನಂತರ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿ, "ಆಲ್ರೆಡಿ ಡಿಕ್ಲೇರ್ ಆಗಿದೆ. ಪ್ರಭಾ ಎರಡು ಲಕ್ಷ ಮತಗಳಿಂದ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ಆಗುತ್ತೆ ಎಂದು ಬರೆದುಕೊಡುವೆ. ಒಂದು ನೂರು ರೂಪಾಯಿ ಇಬ್ಬರು ಬಾಜಿ ಕಟ್ಟೋಣ, ಗೆಲುವು ನಮ್ಮದೇ. ಜನರದ್ದೇ ನಮಗೆ ಕಾನ್ಫಿಡೆನ್ಸ್. ರಾಜ್ಯದ್ದು ತೆಗೆದುಕೊಂಡು ನಾನೇನ್ ಮಾಡಲಿ. ದಾವಣಗೆರೆ ಲೋಕಸಭಾಕ್ಷೇತ್ರ ನಮಗೆ ಮುಖ್ಯ. ಯಾರು ಎಲೆಕ್ಷನ್ನಲ್ಲಿ ದುಡ್ಡು ಹಂಚುತ್ತಾರೆ ಹೇಳಿ. ಚುನಾವಣೆಯಲ್ಲಿ ಅವರೇನ್ ಮಾಡಿದ್ದಾರೆ. ನಿಮ್ಮ ಅಳಿಯಾ ಕತ್ತೆ ಕಾಯುತ್ತಿದ್ದಾನಾ? ಎಂದು ನಿಮ್ಮ ಮಾವ ಹೇಳಿದ ಎಂದು ಹೇಳಿ'' ಎಂದು ಶಾಮನೂರು ಶಿವಶಂಕರಪ್ಪ ಅಳಿಯ ಜಿ. ಎಂ ಸಿದ್ದೇಶ್ವರ್ಗೆ ಟಾಂಗ್ ಕೊಟ್ರು.
ಸಿದ್ದರಾಮಯ್ಯನವರ ಗ್ಯಾರಂಟಿಗಳು ಕೆಲಸ ಮಾಡಲಿವೆ :ಮತದಾನದ ಬಳಿಕ ಮಾತನಾಡಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್,"ಎಂಟು ವಿಧಾಸಭಾ ಕ್ಷೇತ್ರಗಳಲ್ಲಿ ನಮಗೆ ಮತ ಹಾಕಿ ಜನ ಜಯಶೀಲರಾಗಿ ಮಾಡ್ತಾರೆಂಬ ವಿಶ್ವಾಸ ಇದೆ. ಈ ಬಾರಿ ಸಿಎಂ ಸಿದ್ದರಾಮಯ್ಯನವರ ಗ್ಯಾರಂಟಿಗಳು ಕೆಲಸ ಮಾಡಲಿವೆ. ಜನ ಬದಲಾವಣೆ ಬಯಸಿದ್ದಾರೆ. ಗ್ಯಾರಂಟಿಗಳಿಂದ ಮಹಿಳೆಯರು ನಮಗೆ ಆಶೀರ್ವಾದ ಮಾಡಲಿದ್ದಾರೆ. ನಮ್ಮದು ದುಡಿದ ಗಂಟು ಖರ್ಚು ಮಾಡ್ತಿದ್ದೀವಿ. ಭ್ರಷ್ಟಾಚಾರ ಅವರಲ್ಲಿದೆ ಎಂದು ಜಿ. ಎಂ ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಇವರಿಂದ ಕಾರ್ಯಕರ್ತರು ದೂರ ಸರಿದಿದ್ದಾರೆ. ಏಕೆ ದೂರ ಸರಿದ್ರು. ಇವರ ದುರಂಹಕಾರದಿಂದ ಈ ರೀತಿ ಆಗ್ತಿದೆ. ಅವರ ಕಾರ್ಯಕರ್ತರು ಕೂಡ ನಮಗೆ ಒಳ್ಳೆ ಸಮಯದಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದರು.