ರಾಮನಗರ:ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಟೋಲ್ ತಪ್ಪಿಸಿಕೊಂಡು ಹೋಗುತ್ತಿರುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೊಡ್ಡ ಶಾಕ್ ನೀಡಿದೆ. ಟೋಲ್ ತಪ್ಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದೆ.
ಈ ಮೂಲಕ ಟೋಲ್ ಕಟ್ಟಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗಳಿಂದ ತಪ್ಪಿಸಿಕೊಳ್ಳಲು ಅನ್ಯ ಮಾರ್ಗಗಳನ್ನು ಬಳಸುವುದು, ಬಳಿಕ ಹೆದ್ದಾರಿಗೆ ಎಂಟ್ರಿ ಕೊಡುವ ವಾಹನ ಚಾಲಕರ ಮೇಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹದ್ದಿನ ಕಣ್ಣಿಟ್ಟಿದೆ. ಅದರಲ್ಲೂ ಬೆಂ-ಮೈ ಎಕ್ಸ್‌ಪ್ರೆಸ್‌ವೇ ಮಾರ್ಗದಲ್ಲಿ ಟೋಲ್ ತಪ್ಪಿಸಿಕೊಂಡು ಓಡಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ ಎನ್ನುವ ದೂರುಗಳು ಹೆಚ್ಚಾಗಿ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿದೆ.
ಅದರಲ್ಲೂ, ಮೈಸೂರಿನಿಂದ ಬರುತ್ತಿದ್ದ ವಾಹನ ಸವಾರರು ಬಿಡದಿ ಬಳಿ ಸರ್ವಿಸ್ ರಸ್ತೆ ಪ್ರವೇಶಿಸುವ ಮೂಲಕ ಟೋಲ್ ಗೇಟ್‌ನಿಂದ ತಪ್ಪಿಸಿಕೊಳ್ಳುತ್ತಿದ್ದರು. ಈ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಕಳ್ಳದಾರಿಯನ್ನು ಬಂದ್ ಮಾಡಲಾಗಿದೆ. ಬಹಳ ದಿನಗಳಿಂದಲೂ ಈ ಕಳ್ಳಾಟ ನಡೆಯುತ್ತಿದ್ದು, ಕೊನೆಗೂ ಬ್ರೇಕ್ ಹಾಕಲಾಗಿದೆ.
ಸರ್ವೀಸ್ ರಸ್ತೆ ಎಲ್ಲೆಲ್ಲಿ ಬಂದ್?:ಬಿಡದಿಯ ಶೇಷಗಿರಿಹಳ್ಳಿ ಬಳಿ ಸರ್ವೀಸ್ ರಸ್ತೆಯನ್ನು ಮುಚ್ಚಲಾಗಿದೆ. ಇದರಿಂದ 5 ಕಿ.ಮೀ.ಗೂ ಹಿಂದಿನಿಂದಲೇ ಮೈಸೂರಿನಿಂದ ಬರುವವರು ಹಾಗೂ ನೇರವಾಗಿ ಎಕ್ಸ್ಪ್ರೇಸ್ವೇಯಲ್ಲಿ ಸಾಗಬೇಕಿದೆ. ಬಿಡದಿಯ ಮೂಲಕವೇ ಮುಂದೆ ಸಂಚರಿಸಬೇಕಿದೆ. ಹಾಗೆಯೇ, ಶ್ರೀರಂಗಪಟ್ಟಣ ಬಳಿಯ ಟೋಲ್ ಗೇಟ್ ಸಮೀಪವೂ ಕೂಡ ಸರ್ವೀಸ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.