ಶಿವಮೊಗ್ಗ:ಜಿಲ್ಲೆಯ ಬಿಜೆಪಿಯ ಹಿರಿಯ ಮುಖಂಡ ವಿಧಾನ ಪರಿಷತ್ನ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ (69) ಇಂದು ಅಕಾಲಿಕ ನಿಧನರಾಗಿದ್ದಾರೆ. ಬಿಜೆಪಿ ಹಿರಿಯ ಮುಖಂಡ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರ ನಿಧನಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಆರ್.ಅಶೋಕ್ ಸಂತಾಪ: ಹಿರಿಯರು, ನನ್ನ ಆತ್ಮೀಯರು, ಮಾರ್ಗದರ್ಶಕರು ಆದ ಶ್ರೀ ಎಂ.ಬಿ. ಭಾನುಪ್ರಕಾಶ್ ಅವರ ಹಠಾತ್ ನಿಧನದ ಸುದ್ದಿ ತೀವ್ರ ಆಘಾತ ಮೂಡಿಸಿದೆ ಎಂದು ಪ್ರತಿಪಕ್ಷದ ನಾಯಕರ ಆರ್.ಅಶೋಕ್ ಹೇಳಿದ್ದಾರೆ. ತಮ್ಮ ಜೀವನದುದ್ದಕ್ಕೂ ಜನಪರ ಹೋರಾಟ, ಸಂಘರ್ಷ, ಸಂಘಟನೆಯಲ್ಲೇ ಕಳೆದ ಭಾನುಪ್ರಕಾಶ್ ಅವರು ತಮ್ಮ ಕೊನೆ ಉಸಿರನ್ನೂ ಹೋರಾಟದಲ್ಲೇ ಕಳೆದಿದ್ದು ಅವರ ಹೋರಾಟದ ಬದುಕಿನ ದ್ಯೋತಕವಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ತಮ್ಮ ಸರಳತೆ, ಸಜ್ಜನಿಕೆಗೆ ಹೆಸರಾಗಿದ್ದ ಭಾನುಪ್ರಕಾಶ್ ಅವರು ಸತ್ಯ, ನ್ಯಾಯ, ನಿಷ್ಠೆಯ ಪರವಾಗಿ ಮಾತನಾಡುವ ಉತ್ತಮ ವಾಗ್ಮಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಕುಟುಂಬ ಸದಸ್ಯರು, ಬಂಧು-ಬಳಗ ಹಾಗು ಸ್ನೇಹಿತರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಎಸ್ವೈ ಸಂತಾಪ: ಮಾಜಿ ವಿಧಾನಪರಿಷತ್ ಸದಸ್ಯರು, ಸಂಘದ ನಿಷ್ಠಾವಂತ ಸ್ವಯಂಸೇವಕರು, ಪಕ್ಷದ ಉಪಾಧ್ಯಕ್ಷರೂ ಆಗಿ ಪಕ್ಷ ಸಂಘಟನೆಗಾಗಿ ನಿರಂತರ ಶ್ರಮಿಸಿದ್ದ ಸರಳ, ಸಜ್ಜನ, ಆತ್ಮೀಯರೂ ಆದ ಎಂ.ಬಿ. ಭಾನುಪ್ರಕಾಶ್ ಹಠಾತ್ ನಿಧನ ಹೊಂದಿರುವ ಸುದ್ದಿ ಅತೀವ ಆಘಾತವನ್ನು ತಂದಿದೆ. ತಮ್ಮ ಕೊನೆ ಉಸಿರಿರುವವರೆಗೂ ಪಕ್ಷಕ್ಕಾಗಿ ದುಡಿದ ಅವರ ಪರಿಶ್ರಮ, ಬದ್ಧತೆ ನಿಜಕ್ಕೂ ಸ್ತುತ್ಯರ್ಹ. ಅಂತಹ ನಿಷ್ಠಾವಂತ ಹಿರಿಯ ಮುಖಂಡರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅಗಲಿದ ಆ ಹಿರಿಯ ಚೇತನಕ್ಕೆ ಭಗವಂತ ಸದ್ಗತಿಯನ್ನು ನೀಡಲಿ, ಅವರ ಕುಟುಂಬದವರಿಗೆ, ಆಪ್ತೇಷ್ಟರಿಗೆ ಮತ್ತು ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಬೊಮ್ಮಾಯಿ ಸಂತಾಪ : ಮಾಜಿ ವಿಧಾನ ಪರಿಷತ್ ಸದಸ್ಯರು, ನಮ್ಮ ಪಕ್ಷದ ಹಿರಿಯ ನಾಯಕ ಎಂ. ಬಿ. ಭಾನುಪ್ರಕಾಶ್ ಅವರು ನಿಧನರಾದ ವಿಷಯ ತಿಳಿದು ತೀವ್ರ ದುಃಖಿತನಾಗಿದ್ದೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಿ, ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರು ಕುಟುಂಬಕ್ಕೆ ಕರುಣಿಸಲಿ ಎಂದು ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.