ಬೆಳಗಾವಿ:ಬೆಳಗಾವಿಯಲ್ಲಿ ಒಂದೆಡೆ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮತ್ತೊಂದೆಡೆ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ನರೇಗಾ ಕಾರ್ಮಿಕರ ಶ್ರಮದಾನದಿಂದ ನಿರ್ಮಾಣ ಆಗುತ್ತಿರುವ "ಸೈನ್ಸ್ ಪಾರ್ಕ್" ಎಲ್ಲರ ಗಮನ ಸೆಳೆಯುತ್ತಿದೆ. ಏನಿದು ಸೈನ್ಸ್ ಪಾರ್ಕ್..? ಸೌಧ ಮುಂದೆ ಇದೆಂಥಾ ಪಾರ್ಕ್ ಎಂಬ ಕುತೂಹಲವೇ, ಹಾಗಾದ್ರೆ ಈಟಿವಿ ಭಾರತದ ಈ ವಿಶೇಷ ವರದಿ ನೋಡಿ.
ಹೌದು, ಸುವರ್ಣ ವಿಧಾನಸೌಧ ಪಶ್ಚಿಮ ಭಾಗದ ಮುಂದೆ ಸುಮಾರು 1 ಎಕರೆ ಪ್ರದೇಶದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅವರ ವಿಶೇಷ ಕಾಳಜಿಯಿಂದ ಬಯಲು ವಿಜ್ಞಾನ ಉದ್ಯಾನವೊಂದು ತಲೆ ಎತ್ತುತ್ತಿದೆ. ಬೆಂಗಳೂರಿನ ಗ್ಯಾಂತ್ರೋ ಕಂಪನಿಯು, ಸೌಧಕ್ಕೆ ಜಾಗ ಕೊಟ್ಟ ಹಲಗಾ, ಬಸ್ತವಾಡ ಗ್ರಾಮದ ನರೇಗಾ ಕೂಲಿ ಕಾರ್ಮಿಕರ ನೆರವಿನೊಂದಿಗೆ ಪಾರ್ಕ್ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ, ಭೂಗೋಳದ ಪ್ರಮುಖ ಅಂಶಗಳ ಸುಮಾರು 22 ಪ್ರಾಯೋಗಿಕ ಮಾದರಿಗಳನ್ನು ಆಕರ್ಷಣೀಯವಾಗಿ ಅಳವಡಿಸಲಾಗುತ್ತಿದ್ದು, ಮಕ್ಕಳಲ್ಲಿ ತೀವ್ರ ಕುತೂಹಲದ ಜತೆ ಹಲವು ನಿಗೂಢತೆಗಳಿಗೆ ಉತ್ತರವೂ ದೊರೆಯುತ್ತದೆ. ಅಲ್ಲದೇ ಚಟುವಟಿಕೆ ಆಧಾರಿತ ಕಲಿಕೆಗೆ ಅನುಕೂಲವಾಗುವಂತೆ ವಿಜ್ಞಾನ ಪಾರ್ಕ್ ವಿನ್ಯಾಸಗೊಳಿಸಲಾಗುತ್ತಿದೆ.
"ಸೈನ್ಸ್ ಪಾರ್ಕ್" ಕುರಿತು ಜಿಪಂ ಸಿಇಒ ರಾಹುಲ್ ಶಿಂಧೆ, ಗ್ಯಾಂತ್ರೋ ಕಂಪನಿಯ ಭೀಮರಾವ್ ಕುಲಕರ್ಣಿ ಮಾಹಿತಿ (ETV Bharat) ಪಾರ್ಕ್ನಲ್ಲಿ ಏನೇನಿರುತ್ತೆ..?ನ್ಯೂಟನ್ ಹಾಗೂ ಆರ್ಕಿಮಿಡಿಸ್ ತತ್ವಗಳ ಪ್ರಾಯೋಗಿಕ ನಿರೂಪಣೆ ಮಾದರಿ, ನೆರಳಿನಿಂದ ಸಮಯ ಗುರುತಿಸುವಿಕೆ, ಮಳೆ ಹಾಗೂ ತೇವಾಂಶದ ಮಾಪನ, ವಿವಿಧ ವಾಹನಗಳು ಹೇಗೆ ಚಲಿಸುತ್ತವೆ ಎಂಬ ಸಂಪೂರ್ಣ ವಿವರಣೆ, ಬೆಳಕಿನ ನಾನಾ ಪ್ರಯೋಗಗಳು, ಪೆರಿಸ್ಕೋಪ್, ಮಸೂರಗಳ ಮಾದರಿಗಳು, ಕನ್ನಡಿಯೊಳಗಿನ ಆಟ, ಪ್ರಚ್ಛನ್ನ ಶಕ್ತಿಯಿಂದ ಚಲನಶಕ್ತಿ ಪ್ರಯೋಗ, ಸಿಂಪಥೆಟಿಕ್ ಸ್ವಿಂಗ್, ಪೈಥಾಗೋರಸ್ ಪ್ರಮೇಯ, ಸರಳ ಕ್ಯಾಮರಾ, ಗುರುತ್ವಾಕರ್ಷಣೆಯ ಚೆಂಡು, ಪ್ರತಿಧ್ವನಿ, ಕೇಂದ್ರ ತ್ಯಾಗಿ ಶಕ್ತಿ, ಜಲ ವಿದ್ಯುತ್ ಉತ್ಪಾದನೆ, ಸೋಲಾರ್ ವಾಟರ್ ಹೀಟರ್ ನ ಸ್ಕ್ವೇರ್ ವ್ಹೀಲ್ ಸೈಕಲ್, ಗೇರ್‌ಗಳ ವಿವಿಧ ಮಾದರಿಗಳು, ತ್ರೀ ಡಿ ಪೆಂಡುಲಮ್, ಜಿನಿಟಿಕ್ ಮಾದರಿಗಳು ಸೇರಿ ಹಲವಾರು ಪ್ರಯೋಗಗಳನ್ನು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.
ನಿರ್ಮಾಣ ಆಗುತ್ತಿರುವ "ಸೈನ್ಸ್ ಪಾರ್ಕ್" (ETV Bharat) ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಜಿಪಂ ಸಿಇಒ ರಾಹುಲ್ ಶಿಂಧೆ, "ಸುವರ್ಣ ವಿಧಾನಸೌಧಕ್ಕೆ ಆಗಮಿಸುವ ಮಕ್ಕಳಿಗೆ ವಿಜ್ಞಾನದ ವಾತಾವರಣ ನಿರ್ಮಿಸಬೇಕು ಎಂಬ ಉದ್ದೇಶದಿಂದ ಈ ಪಾರ್ಕ್ ನಿರ್ಮಿಸುತ್ತಿದ್ದೇವೆ. ಇಲ್ಲಿ ಅಳವಡಿಸುವ ವಿಜ್ಞಾನ ಮಾದರಿಗಳಿಂದ ಮಕ್ಕಳಿಗೆ ಸಾಕಷ್ಟು ಮಾಹಿತಿ ತಿಳಿಯಲಿದೆ. 200ಕ್ಕೂ ಅಧಿಕ ನರೇಗಾ ಕೂಲಿ ಕಾರ್ಮಿಕ ಮಹಿಳೆಯರು, ಗ್ಯಾಂತ್ರೋ ಕಂಪನಿ ತಂತ್ರಜ್ಞ ವರ್ಗ ಕಳೆದ ಒಂದು ವಾರದಿಂದ ಉದ್ಯಾನ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು, ಮುಖ್ಯಮಂತ್ರಿಗಳು, ಸಭಾಧ್ಯಕ್ಷರು, ಸಭಾಪತಿಗಳ ಸಮಯ ನೋಡಿಕೊಂಡು ಅಧಿವೇಶನದ ಮೊದಲ ವಾರದಲ್ಲಿ ಪಾರ್ಕ್ ಉದ್ಘಾಟಿಸಲಾಗುತ್ತದೆ" ಎಂದು ತಿಳಿಸಿದರು.
ನರೇಗಾ ಕಾರ್ಮಿಕರ ಶ್ರಮದಾನದಿಂದ ನಿರ್ಮಾಣ ಆಗುತ್ತಿರುವ "ಸೈನ್ಸ್ ಪಾರ್ಕ್" (ETV Bharat) "ಆಟ ಆಡುತ್ತಲೇ ಮಕ್ಕಳು ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಇಲ್ಲಿ ತಿಳಿಯಬಹುದಾಗಿದೆ. ಪ್ರತಿ ವಿಜ್ಞಾನ ಚಾಲನಾ ಮಾದರಿಗಳ ಮುಂದೆ ಪ್ರಯೋಗದ ಉದ್ದೇಶ, ತತ್ವ, ಉಪಯೋಗ ಸೇರಿ ನಾನಾ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲಭಾಷೆಯಲ್ಲಿ ನಮೂದಿಸಲಾಗುತ್ತದೆ. ಇದೊಂದು ಬಯಲು ಉದ್ಯಾನ ಆಗಿರಲಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇದು ಉಪಯುಕ್ತವಾಗಲಿದೆ. ಅಲ್ಲದೇ ಇಲ್ಲಿನ ಉಪಕರಣಗಳು ಮಳೆ, ಚಳಿ, ಬಿಸಿಲಿಗೆ ಹಾನಿಯಾಗಲ್ಲ. ಇನ್ನು, ಪ್ರತಿ ಮಾದರಿ ಮುಂಭಾಗದ ಮಾಹಿತಿ ಫಲಕದಲ್ಲಿ ಕ್ಯೂ ಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಆ ಪ್ರಯೋಗದ ಸಂಪೂರ್ಣ ವಿವರವೂ ದೊರೆಯಲಿದೆ" ಎನ್ನುತ್ತಾರೆ ಗ್ಯಾಂತ್ರೋ ಕಂಪನಿಯ ಭೀಮರಾವ್ ಕುಲಕರ್ಣಿ.
ನಿರ್ಮಾಣ ಹಂತದಲ್ಲಿರುವ ಸೈನ್ಸ್ ಪಾರ್ಕ್ (ETV Bharat) ಸೈನ್ಸ್ ಪಾರ್ಕ್ ನಿರ್ಮಾಣದಲ್ಲಿ ತೊಡಗಿದ್ದ ಸೌಧ ಸಮೀಪದ ಕೊಂಡಸಕೊಪ್ಪ ಗ್ರಾಮದ ನರೇಗಾ ಕೂಲಿ ಕಾರ್ಮಿಕ ಮಹಿಳೆ ಶಕುಂತಲಾ ಕುದ್ರೇಮನಿ ಮಾತನಾಡಿ, "ಕಳೆದ ಆರು ದಿನಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಉದ್ಯಾನ ನಮ್ಮ ಮಕ್ಕಳಿಗೆ ಪ್ರೇರಣೆ ಆಗಲಿದೆ. ಇಂದು ನಾವು ಮಾಡುತ್ತಿರುವ ಕೆಲಸ ನಾಳೆ ನಮ್ಮ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುತ್ತದೆ" ಎಂದು ಹರ್ಷ ವ್ಯಕ್ತಪಡಿಸಿದರು. ಇಷ್ಟು ದಿನ ಬೆಳಗ್ಗೆ ನಾವು ಎದ್ದ ತಕ್ಷಣ ಸುವರ್ಣ ಸೌಧ ನೋಡುತ್ತಿದ್ದೆವು. ಇನ್ಮುಂದೆ ಸೌಧದ ಜೊತೆಗೆ ಸೈನ್ಸ್ ಪಾರ್ಕ್ ಕೂಡ ನೋಡಲಿದ್ದೇವೆ. ನಮ್ಮ ಮಕ್ಕಳಿಗೆ ಇಂಥ ಪಾರ್ಕ್ ತೋರಿಸಲು ದೂರದೂರಿಗೆ ಕರೆದುಕೊಂಡು ಹೋಗಬೇಕಾಗಿತ್ತು. ಈಗ ಇಲ್ಲಿಯೇ ಆಗುತ್ತಿದೆ. ನಾವು ಕೂಡ ಖುಷಿಯಿಂದ ಈ ಕೆಲಸ ಮಾಡುತ್ತಿದ್ದೇವೆ" ಎಂಬುದು ಮತ್ತೋರ್ವ ಕೂಲಿ ಕಾರ್ಮಿಕ ಮಹಿಳೆ ರೇಖಾ ಕರಗುಪ್ಪಿ ಅಭಿಪ್ರಾಯ.
ನಿರ್ಮಾಣ ಹಂತದಲ್ಲಿರುವ ಸೈನ್ಸ್ ಪಾರ್ಕ್ (ETV Bharat) ಇದನ್ನೂ ಓದಿ:ಬೆಳಗಾವಿ ಚಳಿಗಾಲ ಅಧಿವೇಶನ: ಭದ್ರತೆ ಕುರಿತು ಈಟಿವಿ ಭಾರತ ಜೊತೆಗೆ ಪೊಲೀಸ್ ಆಯುಕ್ತರ ಸಂದರ್ಶನ