ಶಿವಮೊಗ್ಗ:ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಮೋಸ ಮಾಡೋರು ಇರುತ್ತಾರೆ. ದುರಾಸೆಗೆ ಬಿದ್ದು ಸಾಕಷ್ಟು ಜನರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಮೋಸ ಮಾಡುವವರು ಹಳೆಯ ಪದ್ಧತಿ ಚೈನ್ ಸಿಸ್ಟಮ್ ಬಳಸಿಕೊಂಡು ವಂಚನೆ ಎಸಗಿದ್ದಾರೆ. ಈ ಕುರಿತು ನಗರದಲ್ಲಿ ಪ್ರಕರಣ ದಾಖಲಾಗಿದೆ.
ಕಿಶೋರಕುಮಾರ ಎಂಬುವರಿಗೆ ನಾಗರಾಜ ಎಂಬುವವರು Make free trips ಎಂಬ ಕಂಪನಿಯ ಬಗ್ಗೆ ತಿಳಿಸಿದ್ದರು. ನೀವು ಈ ಕಂಪನಿಗೆ 9000/- ರೂ. ಹಣ ಕಟ್ಟಿ ಸದಸ್ಯರಾಗಿ. ನೀವು ಬೇರೆ 06 ಜನ ಸದಸ್ಯರನ್ನು ನಮ್ಮ ಕಂಪನಿಗೆ ಸೇರಿಸಿದರೆ ನಿಮಗೆ ಹೊರ ರಾಜ್ಯಕ್ಕೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ. ನೀವು ಕಟ್ಟಿದ 9000/- ರೂ. ಹಣವನ್ನು ಸಹ ವಾಪಸ್ ಕೊಡುತ್ತೇವೆ ಎಂದು ಹೇಳಿದ್ದರು. ಹಾಗೆಯೇ Make free Money ಗೆ 90000/- ಹಣವನ್ನು ಹೂಡಿಕೆ ಮಾಡಿದರೆ ನಾವು ನಿಮಗೆ ಬೆಂಗಳೂರಿನಿಂದ ಬಾಂಬೆಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ನಂತರ ಬಾಂಬೆಯಿಂದ ಕ್ರೂಜ್ ಎಂಬ ಹಡಗಿನಲ್ಲಿ ಗೋವಾಕ್ಕೆ 02 ರಾತ್ರಿ 03 ಹಗಲು ಉಚಿತವಾಗಿ ಟ್ರಿಪ್ ಕರೆದುಕೊಂಡು ಹೋಗುತ್ತೇವೆ. ನೀವು ನಮ್ಮಲ್ಲಿ ಹಣ ಹೂಡಿಕೆ ಮಾಡಿದ್ದಕ್ಕೆ ಪ್ರತಿಫಲವಾಗಿ ಪ್ರತಿ ತಿಂಗಳು 6000/- ರೂ. ನಂತೆ 33 ತಿಂಗಳು ಅಂದರೆ ಒಟ್ಟು 1,98,000/- ರೂ. ಹಣವನ್ನು ನಿಮಗೆ ವಾಪಸ್ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಈ ಕುರಿತು ಕಿಶೋರ್ ಕುಮಾರ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳಾದ ಮಹಮದ್ ಲತೀಪ್, ಕಿಶೋರ್ ಬಿ.ಕೆ., ಮಹಮದ್ ಅಶ್ರಫ್, ಇವರುಗಳು ಹರ್ಷ ಫರ್ನ್ ಇನ್ ಹೋಟೆಲ್ ಹಾಗೂ ಇತರೆ ಹೋಟೆಲ್‍ಗಳಲ್ಲಿ ಸಾರ್ವಜನಿಕರನ್ನು ಸೇರಿಸಿ ಕಾರ್ಯಕ್ರಮ ಮಾಡಿ Make free trips ಹಾಗೂ Make free Money ಬಗ್ಗೆ ನಂಬಿಕೆ ಬರುವಂತೆ ಮಾಡಿದ್ದರಿಂದ ಕಿಶೋರಕುಮಾರ್ ಅವರು ಅವರ ಮಾತನ್ನು ನಂಬಿ ಆರೋಪಿ ನಾಗರಾಜರವರಿಗೆ ಫೋನ್ ಪೇ/ಗೂಗಲ್ ಪೇ ಹಾಗೂ ನಗದು ರೂಪದಲ್ಲಿ ಒಟ್ಟು 7,52,370/- ರೂ. ಹಣವನ್ನು ಆರೋಪಿ ಕಿಶೋರ್ ಬಿ.ಕೆ.ಗೆ ಫೋನ್ ಪೇ/ಗೂಗಲ್ ಪೇ ಮೂಲಕ 1,16,000/- ರೂ ಹಣವನ್ನು, ಆರೋಪಿ ಮಹಮದ್ ಆಶ್ರಫ್ ಬ್ಯಾಂಕ್ ಖಾತೆಗೆ 1,00,000/- ರೂ. ಹಣವನ್ನು ಹಾಗೂ ಮಹಮದ್ ಲತೀಫ್ ಅವರ ಹೆಂಡತಿ ಪಾತಿಮಾ ಅವರ ಕೆನರಾ ಬ್ಯಾಂಕ್ ಖಾತೆಗೆ 2,80,000/- ರೂ.ಗಳನ್ನು ಕಳುಹಿಸಿಕೊಟ್ಟಿದ್ದರು.