ಬೆಳಗಾವಿ: ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರು ಸೈಲೆಂಟ್ ಆಗಿ ಇರಬಾರದು. ಉಗ್ರವಾಗಿ ವರ್ತಿಸಿದರೆ ಮಾತ್ರ ಅವರಿಗೆ ಉಳಿಗಾಲ. ಇಲ್ಲದಿದ್ದರೆ ನಿಮ್ಮನ್ನು ರಾಜಕೀಯವಾಗಿ ಮುಗಿಸುತ್ತಾರೆ ಎನ್ನುವ ಮೂಲಕ ಸಹೋದರ ಸತೀಶ ಜಾರಕಿಹೊಳಿ ಅವರಿಗೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಿವಿಮಾತು ಹೇಳಿದ್ದಾರೆ.
ಸತೀಶ್ಗೆ ನಾನು ಹೃದಯಪೂರ್ವಕ ಧನ್ಯವಾದ ಹೇಳುತ್ತೇನೆ:ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಕಾಂಗ್ರೆಸ್ ಕಚೇರಿ ನಿರ್ಮಾಣದ ವಿಚಾರದಲ್ಲಿ ಡಿಕೆಶಿ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಟ್ಟಿದ್ದಾರೆ. ಇದನ್ನ ವೇದಿಕೆಯಲ್ಲಿಯೇ ಪ್ರಶ್ನಿಸಿದ ಸತೀಶ ಜಾರಕೊಹೊಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. 2013-18ರಲ್ಲಿ ನಾನು ಕಾಂಗ್ರೆಸ್ ಶಾಸಕ. ಆಗಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಹೈಕಮಾಂಡ್ ಮತ್ತು ರಾಜ್ಯದ ಜನತೆ ಮುಂದೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಮಾಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಮೊದಲ ಬಾರಿಗೆ ಹೇಳಿದಾಗ ಹಾಳಾಗಿ ಹೋಗಲಿ ಅಂತ ಸತೀಶ್ ಜಾರಕಿಹೊಳಿ ಸುಮ್ಮನಿದ್ದರು. ಆದರೆ, ಮತ್ತೆ ಡಿಸಿಎಂ ಡಿಕೆಶಿ-ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಕ್ಕೆ ಸತೀಶ ಜಾರಕಿಹೊಳಿ ವಿರೋಧಿಸಿ ಡಿಸಿಎಂ ಅವರ ಕೈಯಲ್ಲಿದ್ದ ಮೈಕ್ ಇಸಿದುಕೊಂಡು ಮಾತಾಡಿದ್ದಾರೆ. ಅದಕ್ಕೆ ನಾನು ಸತೀಶ ಜಾರಕಿಹೊಳಿ ಅವರಿಗೆ ಹೃದಯಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ವಿರೋಧ ಮಾಡುವ ಸಂದರ್ಭದಲ್ಲಿ ವಿರೋಧಿಸುವ ಶಕ್ತಿ ಇರಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಿರೋಧಿಸುವ ಶಕ್ತಿಯನ್ನು ಸತೀಶ್ಗೆ ಕೊಡಲಿ ಅಂತಾ ಲಕ್ಷ್ಮೀತಾಯಿ ದೇವರಲ್ಲಿ ಬೇಡಿಕೊಳ್ಳುವೆ ಎನ್ನುವ ಮೂಲಕ ಸಹೋದರನ ಪರ ರಮೇಶ ಜಾರಕಿಹೊಳಿ ಬ್ಯಾಟಿಂಗ್ ಬೀಸಿದರು.
ಶಂಕರಾನಂದ ಅವರಿಂದ ಜಾಗ ಪಡೆದು, ಕಟ್ಟಡಕ್ಕೆ ಮಂಜೂರಾತಿ ಪಡೆದಿದ್ದೇವೆ:ಕಾಂಗ್ರೆಸ್ ಕಚೇರಿ ಇರುವ ಜಾಗ ಮಾಜಿ ಕೇಂದ್ರ ಸಚಿವ ಬಿ.ಶಂಕರಾನಂದ ಹೆಸರಲ್ಲಿತ್ತು. ಅವರ ಮಕ್ಕಳಿಂದ ಆ ಜಾಗವನ್ನು ಕಾಂಗ್ರೆಸ್ ಕಚೇರಿಗೆ ಬಿಟ್ಟು ಕೊಡಲು ಮನವೊಲಿಸಿದೆ. ಬಳಿಕ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಕಟ್ಟಡಕ್ಕೆ ಜಾಗ ಮಂಜೂರಾಯಿತು. ಆಗ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಹಣ ತುಂಬಲು ಮನವಿ ಮಾಡಿದರು. ಒಂದೇ ಹಂತದಲ್ಲಿ ಕಾಂಗ್ರೆಸ್ ಕಚೇರಿಗೆ 54 ಲಕ್ಷ ರೂಪಾಯಿ ಕಟ್ಟಬೇಕಿತ್ತು. ನಾನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕಟ್ಟಡ ನಿರ್ಮಾಣಕ್ಕೆ ಒಟ್ಟು 1.27 ಕೋಟಿ ರೂಪಾಯಿ ನಾನು ವೈಯಕ್ತಿಕವಾಗಿ ಕೊಟ್ಟಿದ್ದೀನಿ. ಕಟ್ಟಡ ನಿರ್ಮಾಣದಲ್ಲಿ ಗೋಲ್‌ಮಾಲ್ ಆಗಿದೆ, ಮುಂದಿನ ದಿನಗಳಲ್ಲಿ ಅದನ್ನು ಹೇಳ್ತೀನಿ. ಕಾಂಗ್ರೆಸ್ ಕಚೇರಿ ನಾನೇ ನಿರ್ಮಾಣ ಮಾಡಿದ್ದು ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಿರೋದು ತಪ್ಪು. ಆಗ ಇದ್ದಂತಹ ಕಾಂಗ್ರೆಸ್ ಪಕ್ಷದ ಎಲ್ಲ ಶಾಸಕರು 20ರಿಂದ 25 ಲಕ್ಷ ಹಣ ನೀಡಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದಾರೆ ಅಂತಾ ನನಗೆ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಸುಳ್ಳು ಹೇಳಿದ್ದಾರೆ. ಇದನ್ನ ಖಂಡಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಕಿಡಿಕಾರಿದರು.
ಯಾರೋ ಪುಣ್ಯಾತ್ಮರು ರೊಕ್ಕ ಹಾಕಿ ಕಾಂಗ್ರೆಸ್ ಕಚೇರಿ ಕಟ್ಟಿದ್ದಾರೆ. ಇನ್ಯಾರೋ ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ಗೋಲ್ ಮಾಲ್ ಆಗಿರುವ ಬಗ್ಗೆ ಹಾಲಿ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಅವರನ್ನು ಕೇಳಿ. ಆ ಹಣದಲ್ಲಿ ಗಾಡಿ ತೆಗೆದುಕೊಂಡಿದ್ದಾರೆ, ಚೈನಿ ಮಾಡಿದ್ದಾರೆ ಎಂದು ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಹೇಳದೇ ರಮೇಶ ಜಾರಕಿಹೊಳಿ ಆರೋಪಿಸಿದರು.