ಹಾವೇರಿ : ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಅಜ್ಜಂಫೀರ್ ಖಾದ್ರಿ ಒಬ್ಬ ವ್ಯಕ್ತಿ ಅಷ್ಟೇ ಎಂದು ಸಚಿವ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷ ಬಹಳ ದೊಡ್ಡದಿದೆ ಎಂದು ತಿಳಿಸಿದರು. ಚುನಾವಣೆ ಆದ ಮೇಲೆ ಎಲ್ಲ ಗೊತ್ತಾಗುತ್ತೆ. ನಾಲ್ಕು ಜನ ಚೀರಾಡಿದರೆ ಬಹಳ ದೊಡ್ಡ ಶಕ್ತಿ ಅಲ್ಲ. ಇಂಥ ಚುನಾವಣೆ ಬಹಳ ನೋಡಿದ್ದೇವೆ ಎಂದು ತಿಳಿಸಿದರು.
ಇಲ್ಲಿ ಖಾದ್ರಿ ಪ್ರಶ್ನೆ ಬರಲ್ಲ, ಬಿಜೆಪಿ ವರ್ಸಸ್ ಕಾಂಗ್ರೆಸ್ ಅಷ್ಟೆ. ಬಿಜೆಪಿಯವರದೇನು ಜಗಳ ಇಲ್ಲವಾ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದರು. ಬಿಜೆಪಿಯವರು ಬರೋಬ್ಬರಿ ಇದಾರಾ? ಅವರಲ್ಲಿ ಜಗಳ ಇಲ್ಲವಾ? ಎಂದು ಮರು ಪ್ರಶ್ನೆ ಹಾಕಿದರು.
ಸತೀಶ್ ಜಾರಕಿಹೊಳಿ ಮಾತನಾಡಿದರು (ETV Bharat) ಖಾದ್ರಿ ಬಂಡಾಯ ಪರಿಹಾರ ಮಾಡೋಕೆ ಪ್ರಯತ್ನ ಮಾಡುತ್ತೇವೆ. ಆಗಲಿಲ್ಲ ಅಂದರೆ ಏನು ಮಾಡೋದು? ನಾನು ಚಡ್ಡಿ ಹಾಕೊಂಡು ಬಂದಿದ್ದೇನೆ, ಕುಸ್ತಿ ಆಡೋನೇ ಅಂದರೆ ನಾವೇನು ಮಾಡಲು ಆಗುತ್ತೆ? ಗೋಡಾ ಹೈ ಮೈದಾನ್ ಹೈ ಎಷ್ಟು ಓಡ್ತಾರೆ ಓಡಲಿ. ಮನವೊಲಿಕೆ ಪ್ರಯತ್ನ ಮಾಡುತ್ತೇವೆ. ಖಾದ್ರಿಗೆ ಟಿಕೆಟ್ ಕೊಟ್ಟಿದ್ದರೆ ಇವನು ಪಠಾಣ್ ಸೆಡ್ಡು ಹೊಡೆತಿದ್ದ. ಚನ್ನಪಟ್ಟಣ, ಸಂಡೂರು ಏನಾಯಿತು? ತಿಳಿ ಆಗಲು ಸಮಯ ತಗೊಳುತ್ತೆ, ಸರಿ ಮಾಡೋ ಪ್ರಯತ್ನ ಮಾಡ್ತೀವಿ. ಇಲ್ಲಾಂದ್ರೆ ಮೈದಾನ್ ಖಾಲಿ ಹೈ ಎಂದು ಹೇಳಿದರು.
ಹಾವೇರಿ ಜಿಲ್ಲೆ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಸಿಗದ ಬೆನ್ನಲ್ಲಿಯೇ ಅಜ್ಜಂಫೀರ್ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ಮುಖಂಡರಿಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.
ನಾವು 100% ಗೆಲ್ಲುತ್ತೇವೆ : ನಮ್ಮ ಅಭ್ಯರ್ಥಿ ಪರ ಜನರ ಒಲವಿದೆ. ನಾವು ಶೇ 100ಕ್ಕೆ 100 ಗೆಲ್ಲುತ್ತೇವೆ ಎಂದು ಸಚಿವ ಶಿವಾನಂದ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಪಚುನಾವಣೆ ನಡೆಯುವ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಬಂಡಾಯ ಎದ್ದಿರುವ ಖಾದ್ರಿಗೆ ತಿಳಿವಳಿಕೆ ಹೇಳಿ ಮನವೊಲಿಸುತ್ತೇವೆ. ನಾಮಪತ್ರ ವಾಪಾಸ್ಗೆ ಟೈಂ ಇದೆ ಎಂದರು.
ಈ ಸಲ ಪಠಾಣ್ಗೆ ಮತ್ತೆ ಮೇಲಿನವರು ನಿರ್ಣಯ ಮಾಡಿದಾರೆ. ಸಚಿವ ಜಮೀರ್ ಕಾರಿಗೆ ಕಲ್ಲು ಹೊಡೆದರೆ ಏನು? ಸಹಜ ಆಕ್ರೋಶ ಅದು. ಖಾದ್ರಿ ಇಟ್ಟುಕೊಂಡೇ ಚುನಾವಣೆ ಮಾಡುತ್ತೇವೆ. ಜಮೀರ್ ಅಹ್ಮದ್ ಅಜ್ಜಂಪೀರ್ ಖಾದ್ರಿ ಅವರ ಗುರುಗಳು. ಅವರ ಕಾರ್ ಮೇಲೆ ಯಾಕೆ ಕಲ್ಲು ಹಾಕ್ತಾರೆ? ಅವರಿಗೆ ಜಮೀರ್ ಅಹ್ಮದ್ ಅವರ ಜೊತೆ ನೇರ ನೇರ ಸಂಬಂಧ ಇದೆ. ಯಾವ ಕಾಲಕ್ಕೂ ಅವರು ಗೆಳೆತನ ಮುರಿಯಲ್ಲ ಎಂದು ಶಿವಾನಂದ ಪಾಟೀಲ್ ಸ್ಪಷ್ಟಪಡಿಸಿದರು.
ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರೋದು ಬಿಜೆಪಿಯವರು:ಕೇಂದ್ರದ ಬಿಜೆಪಿ ದುರಾಡಳಿತವನ್ನ 11 ವರ್ಷದಿಂದ ನೋಡುತ್ತಿದ್ದೇವೆ ಎಂದು ಸಚಿವ ಈಶ್ವರ ಖಂಡ್ರೆ ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಾಡಿರೋದು ಬಿಜೆಪಿಯವರು ಎಂದು ಆರೋಪಿಸಿದರು.
ರಾಜ್ಯದಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಮತ್ತೆ ಇಲ್ಲಿ ಗೆಲ್ಲುತ್ತೇವೆ. ಬಿಜೆಪಿ - ಜೆಡಿಎಸ್ ಕುತಂತ್ರಕ್ಕೆ ಜನ ಉತ್ತರ ಕೊಡ್ತಾರೆ. ಮತ್ತೆ ನಮ್ಮ ಅಭ್ಯರ್ಥಿಗಳು ಪ್ರಚಂಡವಾಗಿ ಗೆಲ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಗ್ಯಾರಂಟಿ ಬೇಡ ಅಂತ ಯಾರೂ ಹೇಳ್ತಾ ಇಲ್ಲ. ಆರ್ಥಿಕತೆ ಅಭಿವೃದ್ಧಿ ಆಗಿದೆ. ಜನ ಖುಷಿಲಿ ಇದಾರೆ. ಜನ ಮತ ಹಾಕ್ತಾರೆ, ನಾವು ಗೆಲ್ಲುತ್ತೇವೆ ಎಂದು ಖಂಡ್ರೆ ತಿಳಿಸಿದರು.
ಇದನ್ನೂ ಓದಿ :ಶಿಗ್ಗಾಂವಿ ಕಾಂಗ್ರೆಸ್‌ನಲ್ಲಿ ಬಂಡಾಯ: ಕೊನೇ ಕ್ಷಣದಲ್ಲಿ ಓಡಿ ಬಂದು ನಾಮಪತ್ರ ಸಲ್ಲಿಸಿದ ಅಜ್ಜಂಪೀರ್ ಖಾದ್ರಿ