ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ದೊಡ್ಡಬಳ್ಳಾಪುರ ನಗರಸಭೆಯಲ್ಲಿಂದು ಸಂಕ್ರಾಂತಿ ಸಂಭ್ರಮ ಮನೆ ಮಾಡಿತ್ತು. ಸಾಂಪ್ರದಾಯಿಕ ಉಡುಗೆ ತೊಟ್ಟ ನಗರಸಭಾ ಸದಸ್ಯರು ರಾಜಕೀಯ ಮರೆತು, ಪಕ್ಷಾತೀತವಾಗಿ ಸೇರಿ ಎಳ್ಳು – ಬೆಲ್ಲ ಹಂಚಿ ಪರಸ್ಪರ ಶುಭ ಕೋರಿದರು.
ಹೌದು, ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಂದು ದಿನ ಮುಂಚೆಯೇ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಗರಸಭೆಯ ಪುರುಷ ಸದಸ್ಯರು ಪಂಚೆ, ಶಲ್ಯ ಧರಿಸಿ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಆಗಮಿಸಿ ಎಲ್ಲರ ಗಮನ ಸೆಳೆದರು. ಮಹಿಳಾ ಸದಸ್ಯರು ಕೈಯಲ್ಲಿ ಎಳ್ಳು-ಬೆಲ್ಲ, ಪೊಂಗಲ್ ಹಿಡಿದು ಹಬ್ಬದ ಸಡಗರ ಹೆಚ್ಚಿಸಿದರು.
ರಂಗೋಲಿಯ ಮೇಲೆ ಕಡಲೆಕಾಯಿ, ಅವರೆಕಾಯಿ, ಗೆಣಸಿಟ್ಟು ಪೂಜೆ ಮಾಡಿದರು. ಗೋ ಪೂಜೆಯ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಎಳ್ಳು – ಬೆಲ್ಲ ಹಂಚಿ ಪರಸ್ಪರ ಶುಭ ಕೋರಿದರು. ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರು, ಸೇರಿದಂತೆ ಎಲ್ಲ ಸದಸ್ಯರು, ಅಧಿಕಾರಿ ವರ್ಗ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷದಿಂದ ಹಬ್ಬ ಆಚರಣೆ ಮಾಡಿದರು.
ಮೊದಲ ಬಾರಿಗೆ ಸಂಕ್ರಾಂತಿ ಆಚರಣೆ:ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಮಾತನಾಡಿ, "ಇದೇ ಮೊದಲ ಬಾರಿಗೆ ನಗರಸಭೆಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತಿದೆ. ಪೌರಕಾರ್ಮಿಕರು, ಸಿಬ್ಬಂದಿ ಮತ್ತು ನಗರಸಭಾ ಸದಸ್ಯರ ಜೊತೆಯಲ್ಲಿ ಹಬ್ಬವನ್ನ ಆಚರಿಸಿದ್ದು ಸಂತಸ ತಂದಿದೆ. ಮುಂದಿನ ಬಜೆಟ್ನಲ್ಲಿ ದೊಡ್ಡಬಳ್ಳಾಪುರ ಜನತೆಗೆ ಒಳ್ಳೆಯ ಯೋಜನೆಗಳನ್ನು ಕೊಡುವುದಾಗಿ" ಹೇಳಿದರು.