ಬೆಂಗಳೂರು: 108 ಆರೋಗ್ಯ ಕವಚದ ಆಂಬ್ಯುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇಂದು ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಂಬ್ಯುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನು ಸರ್ಕಾರ ನೀಡುತ್ತಿದೆ ಎಂದರು.
ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 108 ಆಂಬ್ಯುಲೆನ್ಸ್ ಯೋಜನೆ ಸುಗಮವಾಗಿ ನಡೆಸಲು ಆರ್ಥಿಕ ವರ್ಷ 2023-24ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 210.33 ಕೋಟಿ ರೂ.ಗಳ ಅನುದಾನ ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸದರಿ ಅನುದಾನದಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ ನಿಗದಿಯಾದ 162.40 ಕೋಟಿ ರೂಪಾಯಿಗಳ ಪೂರ್ಣ ಅನುದಾನವನ್ನು ಸೇವಾದಾರರಿಗೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
2024-25ನೇ ಸಾಲಿನಲ್ಲಿ 108 ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ 260.33 ಕೋಟಿ ರೂ.ಗಳ ಅನುದಾನ ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯ ಅನ್ವಯ ವಾರ್ಷಿಕ ರೂ. 162.40 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಬೇಕಾಗಿರುತ್ತದೆ. ಆರೋಗ್ಯ ಇಲಾಖೆ ಹಾಗೂ ಇಎಂಆರ್ಐ ಗ್ರೀನ್ ಹೆಲ್ತ್ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಅನ್ವಯ 711 ಆಂಬ್ಯುಲೆನ್ಸ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸೇವೆ ಒದಗಿಸಿದ್ದಲ್ಲಿ ಪ್ರತಿ ತ್ರೈಮಾಸಿಕಕ್ಕೆ 40.60 ಕೋಟಿ ರೂ. ಗಳಂತೆ ವಾರ್ಷಿಕ 162.40 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ವಿಪಕ್ಷಗಳ ನಾಯಕರು ಅನಗತ್ಯವಾಗಿ ಗ್ಯಾರಂಟಿ ಯೋಜನೆಯಿಂದ ಹಣಕಾಸಿನ ತೊಂದರೆಯಾಗಿದೆ ಎಂದು 108 ಆರೋಗ್ಯ ಕವಚ ಯೋಜನೆಗೆ ತಳುಕು ಹಾಕುವುದರಲ್ಲಿ ಯಾವುದೇ ಹುರುಳಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠಿ ವೇತನದ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಶೇ.45 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಇದೀಗ 108 ಸಿಬ್ಬಂದಿಗಳು ಶೇ.45 ರಷ್ಟು ವೇತನ ಹೆಚ್ಚಳ ಮಾಡಿರುವುದನ್ನ ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ. ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನ ನೀಡುತ್ತಾ ಬಂದಿದೆ ಎಂದರು.