ಕರ್ನಾಟಕ

karnataka

ETV Bharat / state

ಬೋರ್​ವೆಲ್​ ಕೊರೆಸುವ ಯೋಚನೆ ಇದೆಯೇ? ನೀವು ಅನುಸರಿಸಬೇಕಾದ ಮಾನದಂಡಗಳಿವು - BOREWELL PROBLEMS AND SOLUTIONS

ಬೋರ್​ವೆಲ್​ ಕೊರೆಸುವವರು ಯಾವೆಲ್ಲಾ ಮಾನದಂಡಗಳನ್ನು ಅನುಸರಿಸಬೇಕು? ವಿಫಲ ಕೊಳವೆ ಬಾವಿಗಳನ್ನು ಮುಚ್ಚುವುದು ಹೇಗೆ? ಮುಚ್ಚದಿದ್ದರೆ ಯಾವ ರೀತಿಯ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬ ಮಾಹಿತಿ.

BOREWELL PROBLEMS AND SOLUTIONS
ಬೋರ್​ವೆಲ್​ ಕೊರೆಸುವವರು ಅನುಸರಿಸಬೇಕಾದ ಮಾನದಂಡಗಳು (ETV Bharat)

By ETV Bharat Karnataka Team

Published : Dec 31, 2024, 5:20 PM IST

ಬೆಂಗಳೂರು: ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದಿರುವ ಕಾರಣ ಮಕ್ಕಳು ಅದರೊಳಗೆ ಬಿದ್ದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ರಾಜ್ಯದಲ್ಲಿ ಸಾಕಷ್ಟು ವರದಿಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಕೊಳವೆ ಬಾವಿ ಅವಘಡಗಳಿಗೆ ಕಡಿವಾಣ ಹಾಕಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಇರುವ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲು ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ಕ್ಕೆ ತಿದ್ದುಪಡಿ ಮಾಡಲಾಗಿದೆ.

ವಿಫಲ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಇದ್ದಲ್ಲಿ ಡ್ರಿಲ್ಲಿಂಗ್‌ ಏಜೆನ್ಸಿ ಹಾಗೂ ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳಿಗೆ 25 ಸಾವಿರ ರೂ ದಂಡ ಹಾಗೂ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ.

15 ದಿನ ಮುಂಚಿತವಾಗಿ ಮಾಹಿತಿ ನೀಡುವುದು ಕಡ್ಡಾಯ: ಮಸೂದೆಯ 11ಎ ಸೆಕ್ಷನ್‌ ಪ್ರಕಾರ, ಅಧಿಸೂಚಿತ ಪ್ರದೇಶ ಮತ್ತು ಅಧಿಸೂಚಿತವಲ್ಲದ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯಲು ಇಚ್ಚಿಸುವವರು ಸಂಬಂಧಪಟ್ಟ ಪಿಡಿಒ, ವಿಲೇಜ್‌ ಅಕೌಂಟೆಂಟ್‌, ಪಟ್ಟಣ ಪಂಚಾಯಿತಿ, ನಗರಸಭೆ ಮತ್ತು ಬಿಡಬ್ಲೂಎಸ್‌ಎಸ್‌ಬಿ ಸಂಬಂಧಿಸಿದ ವಾರ್ಡ್‌ ಇಂಜಿನೀಯರ್‌ಗಳಿಗೆ 15 ದಿನಗಳ ಮುಂಚಿತವಾಗಿ ಮಾಹಿತಿ ನೀಡಬೇಕು. ಇದನ್ನು ಉಲ್ಲಂಘಿಸಿದ ಡ್ರಿಲ್ಲಿಂಗ್‌ ಏಜೆನ್ಸಿ/ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳಿಗೆ 5 ಸಾವಿರ ರೂ. ದಂಡ ಹಾಗೂ 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವಿಫಲ ಕೊಳವೆ ಬಾವಿ ಮುಚ್ಚುವುದು ಕಡ್ಡಾಯ:ಕೊಳವೆ ಬಾವಿಗಳನ್ನು ಕೊರೆದ ನಂತರ ಡ್ರಿಲ್ಲಿಂಗ್‌ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳು ಕೊಳವೆ ಬಾವಿಗಳನ್ನು ಸ್ಟೀಲ್‌ ಕ್ಯಾಪ್‌ ಹಾಕಿ ಮುಚ್ಚವುದು ಕಡ್ಡಾಯ. ವಿಫಲ ಕೊಳವೆ ಬಾವಿಯನ್ನು ಕೆಸರು ಮಣ್ಣು ತುಂಬಿ ಮುಚ್ಚಬೇಕು ಹಾಗೂ 2x2 ಅಡಿಯ ದಿಬ್ಬ ಮಾಡಿ ದಿಬ್ಬಕ್ಕೆ ಫೆನ್ಸಿಂಗ್ ಮಾಡಬೇಕು. ಡ್ರಿಲ್ಲಿಂಗ್‌ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳು ಕೊಳವೆ ಬಾವಿ ಕೊರೆದ 24 ಗಂಟೆಯೊಳಗೆ ಮುಚ್ಚಿರುವ ಬಗ್ಗೆ ಫೋಟೋ ತಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ತಪಾಸಣೆ ಮಾಡಿ ದೃಢೀಕರಿಸಬೇಕು. ಈ ಬಗ್ಗೆ ಜಾಯಿಂಟ್‌ ಡಿಕ್ಲರೇಷನ್‌ ಅನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ, ಜಮೀನಿನ ಮಾಲೀಕರು ಕೊಳವೆ ಬಾವಿ ರಿಪೇರಿ ಮಾಡಲು ಪಂಪ್‌ ಹೊರತೆಗೆದಾಗ ಕೊಳವೆಬಾವಿಗೆ ಕ್ಯಾಪ್‌ ಹಾಕಿ ಮುಚ್ಚಬೇಕು. ಕೊಳವೆ ಬಾವಿಯನ್ನು ಪುನಃಶ್ಚೇತನ ಮಾಡಲಿಚ್ಚಿಸಿದಲ್ಲಿ ಜಮೀನು ಮಾಲೀಕರು ಕೊಳವೆ ಬಾವಿಗೆ ಮುಚ್ಚಳದಿಂದ ಮುಚ್ಚಿ ಸುರಕ್ಷತೆಯನ್ನು ಕಾಪಾಡಬೇಕು.

ಸೈನ್‌ ಬೋರ್ಡ್‌ ಕಡ್ಡಾಯ:ಕೊಳವೆ ಬಾವಿಯನ್ನು ಕೊರೆಯುವಾಗ ಎಲ್ಲರಿಗೂ ಕಾಣುವ ರೀತಿಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ಬಗ್ಗೆ ಎಚ್ಚರಿಕೆಯ ಬೋರ್ಡ್‌ ಪ್ರದರ್ಶಿಸಬೇಕು. ಯಾವುದೇ ಅವಘಡಗಳಾಗದಂತೆ ಎಚ್ಚರವಹಿಸುವುದು ಕಡ್ಡಾಯವಾಗಿದೆ. ಇದಕ್ಕಾಗಿ ಸುತ್ತಲೂ ಫೆನ್ಸಿಂಗ್‌ ನಿರ್ಮಿಸಿಕೊಳ್ಳಬೇಕು.

ಸ್ಥಳೀಯ ಪ್ರಾಧಿಕಾರ/ಅಧಿಕಾರಿಗಳ ಜವಾಬ್ದಾರಿಗಳು: ಸ್ಥಳೀಯ ಪ್ರಾಧಿಕಾರ ಅಥವಾ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಯುವ ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಿಕೆಯ ಅಂಶಗಳನ್ನು ಪಾಲಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತಮ್ಮ ವ್ಯಾಪ್ತಿಯಲ್ಲಿ ಕೊರೆಸಲಾಗುತ್ತಿರುವ ಕೊಳವೆ ಬಾವಿಗಳ ಬಗ್ಗೆ ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಮಾಹಿತಿ ಸಲ್ಲಿಸಬೇಕು. ಇಂಪ್ಲಿಮೆಂಟಿಂಗ್‌ ಏಜೆನ್ಸಿಯವರು ಸಹ ಕೊಳವೆ ಬಾವಿಯನ್ನು ಮುಚ್ಚುವ ಬಗ್ಗೆ ನಿಗಾವಹಿಸಬೇಕು. ಅಲ್ಲದೇ ಪಿಡಿಒಗಳು ಗ್ರಾಮ ಪಂಚಾಯತ್‌ ಕಚೇರಿಯಲ್ಲಿ ಕೊಳವೆ ಬಾವಿ ಮುಚ್ಚುವ ವಿಧಾನಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೋರ್ಡ್‌ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ.

ಜೈಲು ಶಿಕ್ಷೆ, ದಂಡ: ಇಂಪ್ಲಿಮೆಂಟಿಂಗ್‌ ಏಜೆನ್ಸಿ ಹಾಗೂ ಡ್ರಿಲ್ಲಿಂಗ್‌ ಏಜೆನ್ಸಿಗಳು ಮಸೂದೆಯ 11ಎ ಸೆಕ್ಷನ್‌ನಲ್ಲಿರುವ ನಿಯಮಗಳನ್ನು ಪಾಲಿಸದಿದ್ದಲ್ಲಿ 10 ಸಾವಿರ ರೂ ಜುಲ್ಮಾನೆ ಹಾಗೂ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಬಹುದು. ಸೆಕ್ಷನ್‌ 21ಎ ನಿಯಮಗಳನ್ನು ಉಲ್ಲಂಘಿಸುವ ಇಂಪ್ಲಿಮೆಂಟಿಂಗ್‌ ಏಜೆನ್ಸಿ, ಡ್ರಿಲ್ಲಿಂಗ್‌ ಏಜೆನ್ಸಿಗಳು, ಸರ್ವಿಸಿಂಗ್‌ ಏಜೆನ್ಸಿಗಳಿಗೆ 25 ಸಾವಿರ ರೂ. ದಂಡ ಹಾಗೂ ಒಂದು ವರ್ಷದ ಜೈಲು ಶಿಕ್ಷೆ ವಿಧಿಸುವ ಅವಕಾಶವನ್ನು ಈ ಮಸೂದೆಯಲ್ಲಿ ಅಳವಡಿಸಲಾಗಿದೆ. ಅಲ್ಲದೇ, ತಮ್ಮ ಜವಾಬ್ದಾರಿ/ಕರ್ತವ್ಯಗಳನ್ನು ನಿಭಾಯಿಸುವಲ್ಲಿ ವಿಫಲವಾಗುವ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲು ಮಸೂದೆಯಲ್ಲಿ ನಿಯಮಗಳನ್ನು ಅಳವಡಿಸಲಾಗಿದೆ.

"ಹೆಚ್ಚುತ್ತಿರುವ ಕೊಳವೆ ಬಾವಿಗಳಿಂದ ರಾಜ್ಯದಲ್ಲಿ ದಿನೇ ದಿನೇ ಅಂತರ್ಜಲ ಕುಸಿಯುತ್ತಿದೆ. ಇದನ್ನು ತಡೆಗಟ್ಟುವುದು ಹಾಗೂ ಕೊಳವೆ ಬಾವಿಗಳನ್ನು ಸಮರ್ಪಕವಾಗಿ ಮುಚ್ಚದೇ ಆಗುವ ಅವಘಡಗಳಿಗೆ ಬ್ರೇಕ್‌ ಹಾಕುವುದು ನಮ್ಮ ಉದ್ದೇಶ. ನಿಯಮಗಳನ್ನು ಉಲ್ಲಂಘಿಸುವ ಇಂಪ್ಲಿಮೆಂಟಿಂಗ್‌ ಏಜೆನ್ಸಿ, ಡ್ರಿಲ್ಲಿಂಗ್‌ ಏಜೆನ್ಸಿಗಳು, ಸರ್ವಿಸಿಂಗ್‌ ಏಜೆನ್ಸಿಗಳಿಗೆ 25 ಸಾವಿರ ರೂ. ದಂಡ ಹಾಗೂ ಒಂದು ವರ್ಷದ ಜೈಲು ಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಈ ಮಸೂದೆಯಲ್ಲಿ ಅಳವಡಿಸಲಾಗಿದೆ" ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದ್ದಾರೆ.

ಕೊಳವೆ ಬಾವಿ ಕೊರೆಸಲು ಮಾನದಂಡಗಳೇನು?:

  • ಕೊಳವೆ ಬಾವಿ ಕೊರೆಯಲು ಇಚ್ಚಿಸುವವರು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಿಗಳಿಗೆ 15 ದಿನಗಳ ಮುನ್ನವೇ ಮಾಹಿತಿ ನೀಡಬೇಕು.
  • ಕೊಳವೆ ಬಾವಿ ಕೊರೆದ 24 ಗಂಟೆಯೊಳಗೆ ಮುಚ್ಚಿರುವ ಬಗ್ಗೆ ಫೋಟೋ ತೆಗೆದು ಸುರಕ್ಷಿತವಾಗಿ ಮುಚ್ಚಿರುವುದನ್ನು ಸ್ಥಳೀಯ ಅಧಿಕಾರಿಗಳು ತಪಾಸಣೆ ಮಾಡಿ ದೃಢೀಕರಿಸಬೇಕು.
  • ಈ ಬಗ್ಗೆ ಜಾಯಿಂಟ್‌ ಡಿಕ್ಲರೇಷನನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
  • ವಿಫಲ ಕೊಳವೆ ಬಾವಿಯನ್ನು ಕೆಸರು ಮಣ್ಣು ಕಲ್ಲುಗಳಿಂದ ಮುಚ್ಚಿ, ಮುಳ್ಳುಗಳನ್ನು ಹಾಕಬೇಕು, 2x2 ಅಳತೆಯ ದಿಬ್ಬವನ್ನು ನಿರ್ಮಿಸಿ ಫೆನ್ಸಿಂಗ್ ಹಾಕಬೇಕು.
  • ಡ್ರಿಲ್ಲಿಂಗ್‌ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್‌ ಏಜೆನ್ಸಿಗಳು ಕೊಳವೆ ಬಾವಿಗಳನ್ನು ಸ್ಟೀಲ್‌ ಕ್ಯಾಪ್‌ ಹಾಕಿ ನಟ್ಟು ಬೋಲ್ಟ್​​ಗಳಿಂದ ಮುಚ್ಚಬೇಕು.

ಇದನ್ನೂ ಓದಿ:

ಅನಧಿಕೃತ ಕೊಳವೆ ಬಾವಿ, ಆಸ್ತಿ ಹಾನಿ ಪ್ರಕರಣಗಳ ಸಂಬಂಧ ಪಾಲಿಕೆಯಿಂದ ದೂರು: ಎಫ್‌ಐಆರ್‌ ದಾಖಲು - BBMP FILED CASE

2023-24ನೇ ಸಾಲಿನ ಗಂಗಾ ಗಲ್ಯಾಣ ಯೋಜನೆಗೆ ಕರೆದಿದ್ದ ಟೆಂಡರ್ ರದ್ದುಪಡಿಸಿದ ಹೈಕೋರ್ಟ್ - high court

ಆಟವಾಡುವ ವೇಳೆ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗುವಿನ ರಕ್ಷಣೆ - ವಿಡಿಯೋ - ​ ETV Bharat Karnataka

ABOUT THE AUTHOR

...view details