ಬಳ್ಳಾರಿ:ತಾಲೂಕಿನ ಸಂಗನಕಲ್ಲಿನ ಸಣ್ಣ ರಾಚಮ್ಮ ಗುಡ್ಡದಲ್ಲಿರುವ ಶಿಲಾಯುಗದ ರೇಖಾಚಿತ್ರಗಳ ಹತ್ತಿರದಲ್ಲಿನ ಬಂಡೆಯನ್ನು ಯಾರೋ ದುಷ್ಕರ್ಮಿಗಳು ಕತ್ತರಿಸಿ ತೆಗೆದುಕೊಂಡು ಹೋಗಿದ್ದು, ಈ ಕುರಿತು ಬಳ್ಳಾರಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗನಕಲ್ಲಿನ ಪ್ರಾಗೈತಿಹಾಸಿಕ ಕಾಲದ ಗುಡ್ಡದಲ್ಲಿ ಶಿಲಾಯುಗದ ರೇಖಾಚಿತ್ರಗಳು ಹಾಗೂ ಗೀರು ಚಿತ್ರಗಳನ್ನು ಹೊಂದಿದ್ದು, ರಾಜ್ಯ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ. ಈ ಸ್ಮಾರಕದ ಸಣ್ಣ ರಾಚಮ್ಮ ಗುಡ್ಡದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಯಂತ್ರವನ್ನು ಬಳಸಿ ಕಲ್ಲನ್ನು ಕೊರೆದು ತೆಗೆದುಕೊಂಡು ಹೋಗಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಲಕೇರಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ.ಆರ್.ಶೇಜೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961ರನ್ವಯ ಸೆಕ್ಸೆನ್ 26 ಉಪ(1)ರನ್ವಯ ಸಂರಕ್ಷಿತ ಸ್ಮಾರಕವನ್ನು ನಾಶಪಡಿಸುವ, ತೆಗೆದುಹಾಕುವ, ಹಾನಿಗೊಳಿಸುವ, ವಿರೂಪಗೊಳಿಸುವ, ಸ್ಥಾನಪಲ್ಲಟಗೊಳಿಸುವ ಮುಂತಾದ ದುಷ್ಕೃತ್ಯವನ್ನು ಮಾಡಿದಲ್ಲಿ ಯಾರೇ ಆಗಲಿ ಮೂರು ತಿಂಗಳುಗಳ ಕಾರಾಗೃಹ ವಾಸ ಮತ್ತು ಎರಡು ಸಾವಿರ ದಂಡ ವಿಧಿಸಬಹುದಾಗಿರುವುದರ ಅಡಿಯಲ್ಲಿ ಸೋಮವಾರ ಬಳ್ಳಾರಿಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.