ಚಿಕ್ಕಮಗಳೂರು :ಕಳೆದ ಕೆಲ ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ನಿಧಾನವಾಗಿ ಒಂದೊಂದೇ ಅವಘಡಗಳು ಪ್ರಾರಂಭವಾಗಿವೆ. ಅನೇಕ ಭಾಗಗಳಲ್ಲಿ ನಾನಾ ತೊಂದರೆಗಳನ್ನು ಜನರು ಎದುರಿಸುತ್ತಿದ್ದಾರೆ. ಕೆಲವರು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಈಗ ನಿರ್ಮಾಣವಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ಏಕೈಕ ರಸ್ತೆ ಮುಳುಗಡೆಯಾಗಿದೆ. ತುಂಬಿ ಹರಿಯುತ್ತಿರುವ ಸೋಮಾವತಿ ಹಳ್ಳ ದಾಟಲು ಪರದಾಟ ನಡೆಸುವಂತಾಗಿದ್ದು, ತರುವೆ ಗ್ರಾಮದ ಸುರೇಶ್ ನಾಯ್ಕ ಕುಟುಂಬಕ್ಕೆ ಜಲ ದಿಗ್ಬಂಧನ ಎದುರಾಗಿದೆ.
ಒಂದೇ ದಿನದಲ್ಲಿ ಹಳ್ಳಕ್ಕೆ ಅಡ್ಡಲಾಗಿ ಕುಟುಂಬಸ್ಥರು ಕಾಲುಸಂಕ ನಿರ್ಮಾಣ ಮಾಡಿದ್ದು, ಮಕ್ಕಳು, ವೃದ್ದರು ಜೀವ ಕೈಯಲ್ಲಿ ಹಿಡಿದು ಹಳ್ಳದಾಟುವ ಸ್ಥಿತಿ ನಿರ್ಮಾಣವಾಗಿದೆ. ಕಿರು ಸೇತುವೆ ನಿರ್ಮಿಸಿ ಕೊಡುವಂತೆ ನಾಲ್ಕು ವರ್ಷಗಳಿಂದ ಮನವಿ ಮಾಡಿದ್ದಾರೆ. ಕುಟುಂಬಸ್ಥರ ಮನವಿಗೆ ಕ್ಯಾರೆ ಎನ್ನದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಇವರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ.
ಮಳೆ ಹೆಚ್ಚಾದರೆ ಉಕ್ಕಿ ಹರಿಯುವ ಸೋಮವತಿ ಹಳ್ಳದ ರೌದ್ರಾವತಾರ ನೋಡಿ ಕುಟುಂಬ ಸದಸ್ಯರು ಬೆಚ್ಚಿ ಬೀಳುತ್ತಿದ್ದು, ಹಳ್ಳ ದಾಟೋ ಭಯದಲ್ಲಿ ಕೃಷಿ ಕಾರ್ಯಗಳು ಸ್ಥಗಿತವಾಗಿವೆ. ಈ ಕುಟುಂಬಸ್ಥರು ಸೇತುವೆಗಾಗಿ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.