ಕರ್ನಾಟಕ

karnataka

ಬಂಟ್ವಾಳ: ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ಕಳವು, ಇಬ್ಬರ ಬಂಧನ

By ETV Bharat Karnataka Team

Published : Mar 3, 2024, 7:32 AM IST

Updated : Mar 3, 2024, 10:16 AM IST

ಕಳೆದ ಆಗಸ್ಟ್​ನಲ್ಲಿ ಬಂಟ್ವಾಳದ ಪಡಿತರ ಅಕ್ಕಿ ಗೋದಾಮಿನಲ್ಲಿ ನಡೆದ ಪಡಿತರ ಅಕ್ಕಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Bantwal
ಅಕ್ಕಿ ಹಗರಣ ಗೋದಾಮು

ಪಡಿತರ ಅಕ್ಕಿ ಕಳವು ಪ್ರಕರಣ: ಹೇಳಿಕೆಗಳು

ಬಂಟ್ವಾಳ:ಬಡವರಿಗೆ ಸರಕಾರ ನೀಡುವ ಪಡಿತರ ಅಕ್ಕಿಯನ್ನು ಗೋಡೌನ್​ನಿಂದಲೇ ಕಳವು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ​ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ವಿಜಯ್​ ಮತ್ತು ರಜಾಕ್ ಬಂಧಿತರು. ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಕಳೆದ ಏಳು ತಿಂಗಳ ಹಿಂದೆ, ತಲಪಾಡಿಯ ಗೋಡೌನಲ್ಲಿಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಪಡಿತರ ಅಕ್ಕಿ ಕಳ್ಳತನ ಮಾಡಲಾಗಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಆರೋಪಿಗಳು ಬಂಧನವಾಗದ ಕಾರಣ ತುಂಗಪ್ಪ ಬಂಗೇರ ಮತ್ತು ಇತರೆ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಕಳವು ನಡೆದು ಹಲವು ತಿಂಗಳು ಕಳೆದು, ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳದೇ ಇರುವುದು ಪ್ರತಿಭಟನಕಾರರ ಆಕ್ರೋಶಕ್ಕೆ ಕಾರಣವಾಗಿತ್ತು.

ಬಡವರ ಪಡಿತರ ಅಕ್ಕಿ ಕಳ್ಳತನ ಮಾಡುವ ಗ್ಯಾಂಗ್ ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ಹಾಗೂ ಸರಕಾರ ವಿಫಲವಾಗಿದೆ ಎಂದು ಜಿ.ಪಂ.ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಆರೋಪಿಸಿ ಪ್ರತಿಭಟನೆ ನಡೆಸಿದ್ದರು.

ಎಂ.ತುಂಗಪ್ಪ ಬಂಗೇರ ಮತ್ತು ಬಿಜೆಪಿಯ ಹಿರಿಯ ಮುಖಂಡ ಎ.ಗೋವಿಂದ ಪ್ರಭು ಪ್ರತಿಕ್ರಿಯಿಸಿದ್ದು, ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈ ಹಗರಣದ ಹಿಂದೆ ಇರುವವರನ್ನೂ ಬಂಧಿಸಿ" ಎಂದು ಒತ್ತಾಯಿಸಿದರು. ತನಿಖೆಗೆ ಸರಕಾರ ಸಹಕಾರ ನೀಡದೇ ನೈಜ ಆರೋಪಿಗಳ ಬಂಧನಕ್ಕೆ ಮೀನಮೇಷ ಎಣಿಸಿದರೆ ಮತ್ತೆ ಪ್ರತಿಭಟನೆಯ ಎಚ್ಚರಿಕೆಯನ್ನು ಅವರು ನೀಡಿದರು.

ಈ ಘಟನೆ ಕಳೆದ ಏಳು ತಿಂಗಳ ಹಿಂದೆ ನಡೆದಿತ್ತು. ಆ ಸಂದರ್ಭದಲ್ಲಿ ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು. ಬಳಿಕ ಆಹಾರ ಇಲಾಖೆಯ ಓರ್ವನನ್ನು ಅಮಾನತು ಮಾಡಲಾಗಿದೆ. ಆದರೆ ಎಷ್ಟು ಸಮಯದಿಂದ ಅಕ್ಕಿ ಸಾಗಾಟ ನಡೆಯುತ್ತಿದೆ, ಯಾವ ಕಡೆಗಳಿಗೆ ಹೋಗುತ್ತಿದೆ ಎಂಬಿತ್ಯಾದಿ ವಿಚಾರಗಳ ಕುರಿತು ಯಾವುದೇ ಸ್ಪಷ್ಟ ಚಿತ್ರಣ ದೊರಕಿಲ್ಲ.

ಮೂರು ಗೋದಾಮುಗಳಲ್ಲಿ ಅಧಿಕಾರಿಗಳು ದಾಸ್ತಾನು ಪರಿಶೀಲನೆ ಮಾಡಿದಾಗ ಅಲ್ಲೂ ಲೆಕ್ಕಾಚಾರ ತಪ್ಪಿದ್ದನ್ನು ಗಮನಿಸಲಾಗಿತ್ತು. ದಾಸ್ತಾನು ಕೊಠಡಿಯಲ್ಲಿ ಯಾಕೆ ಈ ರೀತಿಯ ವ್ಯತ್ಯಾಸವಾಗಿದೆ ಎಂಬುದರ ಮೇಲೆ ಇಲ್ಲಿನ ಡಿಪೋ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಯಾವ ರೀತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂಬುದರ ಬಗ್ಗೆ ಕೆ.ಎಸ್.ಎಪ್.ಸಿ.ಯ ರಾಜ್ಯಮಟ್ಟದ ಅಧಿಕಾರಿಗಳು ತನಿಖೆ ನಡೆಸಿದ್ದರು. ಸುಮಾರು ಕೋಟಿ ಮೌಲ್ಯದ ಕ್ವಿಂಟಲ್ ಅಕ್ಕಿ ಕೊರತೆ ದಾಸ್ತಾನು ಕೊಠಡಿಯಲ್ಲಿ ಕಂಡುಬಂದಿದ್ದು, ಅವ್ಯವಹಾರ ನಡೆದಿರುವ ಬಗ್ಗೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್​ ಕುಮಾರ್ ಹೋಂಡಾ ದೂರು ನೀಡಿದ್ದರು.

ಪಡಿತರ ವಿತರಣೆ ವಿಳಂಬವಾಗುತ್ತಿರುವ ಬಗ್ಗೆ ಅನುಮಾನ ಬಂದು ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ 2023 ಆಗಸ್ಟ್ 17ರಂದು ಬಂಟ್ವಾಳದ ಸಗಟು ಮಳಿಗೆಗೆ ಬಂದು ದಾಸ್ತಾನು ಪರಿಶೀಲಿಸಲಾಯಿತು. ಈ ವೇಳೆ ಫಿಸ್ಟ್ ತಂತ್ರಾಂಶದ ಪ್ರಕಾರ ಸಗಟು ಮಳಿಗೆಯಲ್ಲಿ ಇರಬೇಕಾಗಿದ್ದ ಭೌತಿಕ ದಾಸ್ತಾನುವಿಗಿಂತ ಅಂದಾಜು 1,32,36,030 ರೂ. ಮೌಲ್ಯದ 3,892 ಕ್ವಿಂಟಲ್ ಅಕ್ಕಿ ಕೊರತೆ ಇರುವುದು ಕಂಡುಬಂದಿದೆ ಎಂದು ಬಂಟ್ವಾಳದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಗೋದಾಮಿನ ನಿವಾರ್ಹಕರಾಗಿದ್ದ ಕಿರಿಯ ಸಹಾಯಕರ ವಿರುದ್ಧ ದೂರು ನೀಡಿದನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ:Ration rice: ಬಂಟ್ವಾಳ: ಕೋಟ್ಯಂತರ ರೂಪಾಯಿ ಮೌಲ್ಯದ ಪಡಿತರ ನಾಪತ್ತೆ; ಕ್ರಮಕ್ಕೆ ಶಾಸಕರಿಂದ ಸೂಚನೆ

Last Updated : Mar 3, 2024, 10:16 AM IST

ABOUT THE AUTHOR

...view details