ಹುಬ್ಬಳ್ಳಿ:ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ಹಳ್ಳದ ನೀರನ್ನು ಲೆಕ್ಕಿಸದೇ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ವಾಹನ ಸಮೇತ ಕೊಚ್ಚಿಕೊಂಡು ಹೋದರೂ ಬದುಕುಳಿದಿದ್ದಾರೆ.
ಕಾರನ್ನು ಬಿಟ್ಟು ತನ್ನನ್ನು ತಾನು ರಕ್ಷಿಸಿಕೊಂಡ ಚಾಲಕ:ಪುಡಕಲಕಟ್ಟಿ ಗ್ರಾಮದ ನಾಗರಾಜ ದೇವಣ್ಣವರ ಎಂಬುವವರೇ ಬದುಕಿ ಬಂದವರು. ಕಲಘಟಗಿ ತಾಲೂಕಿನ ಬೇಗೂರು ಬಿಸರಳ್ಳಿ ಹಾಗೂ ಹಿರೇಹೊನ್ನಿಹಳ್ಳಿ ಗ್ರಾಮ ಸಂಪರ್ಕಿಸುವ ಮಧ್ಯಭಾಗದಲ್ಲಿರುವ ಬೇಡ್ತಿ ಸೇತುವೆ ಅತಿ ಕೆಳಮಟ್ಟದಲ್ಲಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೆ ಮೇಲೂ ಹರಿಯುತ್ತಿದೆ.
ನಾಗರಾಜ ದೇವಣ್ಣವರ ಬೇಗೂರು ಗ್ರಾಮದ ಸಂಬಂಧಿಕರ ಮನೆಗೆ ಹೋಗಿ, ಪುಡಕಲಕಟ್ಟಿಗೆ ಮರಳಿ ಬರುವಾಗ ಬೇಡ್ತಿ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಹರಿವನ್ನು ಲೆಕ್ಕಿಸದೇ ಕಾರು ಚಲಾಯಿಸಿಕೊಂಡು ಹೊರಟಿದ್ದಾರೆ. ಸೇತುವೆ ಮಧ್ಯಭಾಗಕ್ಕೆ ಬರುವಷ್ಟರಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಕೊಂಡು ಹೋಗಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಮಯ ಪ್ರಜ್ಞೆ ಉಪಯೋಗಿಸಿದ ನಾಗರಾಜ ಅವರು ಕೂಡಲೇ ಕಾರಿನಿಂದ ಹೊರಜಿಗಿದು ಪಕ್ಕದಲ್ಲಿರುವ ಮರದ ಬೇರು ಹಿಡಿದುಕೊಂಡು, ಮರವನ್ನೇರಿ ಕೊಂಬೆ ಮೇಲೆ ಕುಳಿತು ಸಹಾಯಕ್ಕಾಗಿ ಕೂಗಿದ್ದಾರೆ.