ಕರ್ನಾಟಕ

karnataka

ETV Bharat / state

ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ನಡೆದುಕೊಂಡೇ ತೆರಳುವ ಜನರ ಸಂಕಷ್ಟ​ ಕೇಳೋರಿಲ್ಲವೇ? - Suvarna Soudha Belagavi

ಬೆಳಗಾವಿಯ ಸುವರ್ಣ ವಿಧಾನಸೌಧ ತಲುಪಲು ಜನರಿಗೆ ಸೂಕ್ತ ವಾಹನ ವ್ಯವಸ್ಥೆ ಇಲ್ಲ. ಹೀಗಾಗಿ, ದೂರದೂರುಗಳಿಂದ ಆಗಮಿಸುವ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸೂಕ್ತ ಬಸ್​ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Request of public to arrange suitable bus system to reach Suvarna Soudha
ಕಾರ್ಯ ನಿಮಿತ್ತ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿರುವ ಜನ (ETV Bharat)

By ETV Bharat Karnataka Team

Published : Aug 22, 2024, 6:46 PM IST

ಕಾರ್ಯ ನಿಮಿತ್ತ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿರುವ ಜನ (ETV Bharat)

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಹೋಗಲು ಸಾರ್ವಜನಿಕರು ಪ್ರಯಾಸಪಡುವ ಪರಿಸ್ಥಿತಿ ಇದೆ. ಶಕ್ತಿ ಸೌಧಕ್ಕೆ ನಡೆದುಕೊಂಡೇ ತೆರಳಿ ಬಳಲುತ್ತಿರುವ ಮಂದಿ ಯಾವುದಾದ್ರೂ ವಾಹನ ವ್ಯವಸ್ಥೆ ಮಾಡುವಂತೆ ಆಡಳಿತಕ್ಕೆ ಪರಿಪರಿಯಾಗಿ ಮನವಿ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕ ಜನರಿಗೆ ಅನುಕೂಲವಾಗಲೆಂದು ಬೆಳಗಾವಿ ಹೊರ ವಲಯದ ಹಲಗಾ ಬಸ್ತವಾಡ ಗ್ರಾಮ ಬಳಿ 500 ಕೋಟಿ ರೂ. ವ್ಯಯಿಸಿ ಭವ್ಯ ಸುವರ್ಣ ವಿಧಾನಸೌಧ ನಿರ್ಮಿಸಲಾಗಿದೆ. ಇಲ್ಲಿ ರಾಜ್ಯ ಮಾಹಿತಿ ಹಕ್ಕು ಆಯೋಗದ ಕಚೇರಿ, ಜಿಲ್ಲಾ ಮಟ್ಟದ 23 ಕಚೇರಿಗಳು, ಎಸ್​ಬಿಐ ಶಾಖೆ, ಅಂಚೆ ಕಚೇರಿ ಸೇರಿ ಮತ್ತಿತರ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ದಿನನಿತ್ಯ ನೂರಾರು ಜನರು ವಿವಿಧ ಕೆಲಸಗಳಿಗೆ ಸೌಧಕ್ಕೆ ಆಗಮಿಸುತ್ತಾರೆ.

ಕಾರ್ಯ ನಿಮಿತ್ತ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿರುವ ಜನ (ETV Bharat)

ಹಲಗಾ-ಬಸ್ತವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ-4ರ ವರೆಗೆ ಕೆಎಸ್​ಆರ್​ಟಿಸಿ ಬಸ್, ಖಾಸಗಿ ವಾಹನಗಳಲ್ಲಿ ಬಂದಿಳಿಯುವ ಜನ ಮುಂದೆ ಸುವರ್ಣ ವಿಧಾನಸೌಧಕ್ಕೆ ಸುಮಾರು 1 ಕಿ.ಮೀ. ಮಳೆ, ಬಿಸಿಲಿನಲ್ಲೇ ನಡೆಯಬೇಕು. ಸ್ವಂತ ಬೈಕ್, ಕಾರು ಇದ್ದವರು ನೇರವಾಗಿ ಸೌಧಕ್ಕೆ ಹೋಗುತ್ತಾರೆ. ಆದರೆ, ಸ್ವಂತ ವಾಹನ ಇಲ್ಲದ ಬಡವರು, ಮಧ್ಯಮ ವರ್ಗದವರ ಸಂಕಷ್ಟ ಹೇಳತೀರದಾಗಿದೆ. ವಿದ್ಯುತ್ ಚಾಲಿತ ವಾಹನಗಳ ಸೌಕರ್ಯವನ್ನಾದರೂ ಮಾಡುವಂತೆ ಸಾರ್ವಜನಿಕರು ಕೇಳಿಕೊಳ್ಳುತ್ತಿದ್ದಾರೆ.

ಹೀಗೆ ನಡೆದುಕೊಂಡೇ ಸುವರ್ಣ‌ ವಿಧಾನಸೌಧಕ್ಕೆ ಹೋಗುತ್ತಿದ್ದ ಬಸ್ತವಾಡ ಗ್ರಾಮದ ಜಯಶ್ರೀ ಮಹಾದೇವ ದುರ್ಗಾಯಿ 'ಈಟಿವಿ ಭಾರತ' ಪ್ರತಿನಿಧಿ ಜೊತೆಗೆ ಮಾತನಾಡಿ, "ನಡೆದುಕೊಂಡು ಹೋಗುವುದರಿಂದ ಕೈ ಮತ್ತು ಕಾಲಿಗೆ ತ್ರಾಸ್ ಆಗುತ್ತೆ. ಸ್ವಲ್ಪ ಹೊತ್ತು ಕುಳಿತುಕೊಂಡು ಸಾವಕಾಶ ಮಾಡಿ ಮುಂದೆ ಹೋಗುತ್ತೇವೆ. ನಮ್ಮ ತ್ರಾಸ್ ಸರ್ಕಾರ ಕೇಳಬೇಕು. ಬೋರ್​ವೆಲ್‌ಗೆ​ ಅರ್ಜಿ ಹಾಕಲು ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಿಂದ ಆಗಮಿಸಿ ಸೌಧಕ್ಕೆ ಹೋಗಿ ಬರುವುದರೊಳಗೆ ಕಮ್ಮಿಯೆಂದರೂ ನಾಲ್ಕು ಬಾರಿ ದಾರಿ ಮಧ್ಯೆ ಕುಳಿತುಕೊಂಡೆ. ನಮಗೆ ವಯಸ್ಸಾಗಿದೆ. ದಯವಿಟ್ಟು ವಾಹನ ವ್ಯವಸ್ಥೆ ಮಾಡಿಕೊಡಿ" ಎಂದು ಮನವಿ ಮಾಡಿದರು.

ಕಾರ್ಯ ನಿಮಿತ್ತ ಸುವರ್ಣ ವಿಧಾನಸೌಧಕ್ಕೆ ತೆರಳುತ್ತಿರುವ ಜನ (ETV Bharat)

ಬಾಗಲಕೋಟೆ ಜಿಲ್ಲೆಯ ಲೋಕಾಪುರದಿಂದ ಆಗಮಿಸಿದ್ದ ವಿಠಲ ಆನೆಗುದ್ದಿ ಮಾತನಾಡಿ, "ಎತ್ತರದ ಮೇಲೆ ಸೌಧ ಇರೋದ್ರಿಂದ ನಡೆದುಕೊಂಡು ಹೋಗಲು ತುಂಬಾ ಕಷ್ಟ ಆಗುತ್ತಿದೆ. ವಯಸ್ಸಾದವರಿಗೆ ಇನ್ನೂ ಸಮಸ್ಯೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ ಮತ್ತಿತರ ಜಿಲ್ಲೆಗಳಿಂದ ಜನ ಇಲ್ಲಿಗೆ ಆಗಮಿಸುತ್ತಾರೆ. ಹಾಗಾಗಿ, ಜನರನ್ನು ಬಿಟ್ಟು ಮತ್ತು ಕರೆದುಕೊಂಡು ಬರಲು ಎರಡು ವಾಹನಗಳ ವ್ಯವಸ್ಥೆ ಕಲ್ಪಿಸಬೇಕು" ಎಂದು ಆಗ್ರಹಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು 'ಈಟಿವಿ ಭಾರತ' ಪ್ರತಿನಿಧಿ ಸಂಪರ್ಕಿಸಿದಾಗ, "ಸುವರ್ಣ ವಿಧಾನಸೌಧ ಮುಖ್ಯದ್ವಾರದಿಂದ ವಾಹನಗಳ ವ್ಯವಸ್ಥೆ ಮಾಡುವ ಬೇಡಿಕೆ ಬಂದಿದೆ. ಈ ವಿಚಾರವನ್ನು ಸ್ಪೀಕರ್ ಯು.ಟಿ.ಖಾದರ್ ಗಮನಕ್ಕೆ ತಂದು, ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.

ಇದನ್ನೂ ಓದಿ:ಭೀಮಗಡ ಅರಣ್ಯವಾಸಿಗಳ ಪುನರ್ವಸತಿಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ - villagers Relocation Meeting

ABOUT THE AUTHOR

...view details