ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಿಂದ 77 ಕೈದಿಗಳ ಬಿಡುಗಡೆ (ETV Bharat) ಆನೇಕಲ್ (ಬೆಂಗಳೂರು):ವರ್ಷದಲ್ಲಿ ಮೂರು ಬಾರಿ ಜೈಲಿನ ಕೈದಿಗಳನ್ನು ಬಿಡುಗಡೆಗೊಳಿಸುವ ಆದೇಶದನ್ವಯ ಸನ್ನಡತೆ ತೋರಿದ 77 ಸಜಾ ಬಂಧಿಗಳನ್ನು ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಳಿಸಲಾಯಿತು. ಬೆಂಗಳೂರು-34, ಮೈಸೂರು-07, ಬೆಳಗಾವಿ-5, ಕಲಬುರಗಿ-9, ವಿಜಯಪುರ-6, ಬಳ್ಳಾರಿ-10 ಮತ್ತು ಧಾರವಾಡದ 6 ಜನ ಬಂಧಿಗಳು ಜೈಲಿನಿಂದ ಮುಕ್ತಿ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪಾಲ್ಗೊಂಡರು. ಇದೇ ವೇಳೆ, 2022ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಾಲ್ವರು ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿ ಪದಕ ಹಾಗೂ 2023ನೇ ಸಾಲಿನ 14 ಜನ ಅಧಿಕಾರಿ, ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ನೀಡಿ ಸನ್ಮಾನಿಸಿದರು.
ಕೈದಿಗಳ ಸನ್ನಡತೆ ಹೇಗೆ ನಿರ್ಧಾರ?:ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಮೇರೆಗೆ ಸನ್ನಡತೆ ತೋರಿದ ಬಂಧಿಗಳು ಬಿಡುಗಡೆಗೆ ಅವಕಾಶ ಇದೆ. ಇಂದು ಕಾರಾಗೃಹದಲ್ಲಿದ್ದ 77 ಜನರನ್ನು ಬಿಡುಗಡೆ ಮಾಡಲಾಗಿದೆ. 10, 15 ವರ್ಷ ಜೈಲಿನಲ್ಲೇ ಜೀವನ ಕಳೆದು ಸನ್ನಡತೆ ಕಂಡುಕೊಂಡಿದ್ದಾರೆ. ಒಂದೇ ದಿನದಲ್ಲಿ ಸನ್ನಡತೆ ಪರಿಗಣಿಸಲ್ಲ. ಅದಕ್ಕೆ ಆದ ಕೆಲ ಮಾನದಂಡಗಳು ಇವೆ. ಜೈಲಿನಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ?, ಪರಿವರ್ತನೆಯಾಗಿದ್ದಾರೆ?, ಸಮಾಜದ ನಡುವೆ ಯಾವ ರೀತಿ ಅವರು ಇರಲಿದ್ದಾರೆ ಎಂಬುವುದನ್ನು ಮನನ ಮಾಡಿಕೊಳ್ಳಲಾಗುತ್ತದೆ. ನಂತರ ಸಮಿತಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಬಿಡುಗಡೆ ಪಟ್ಟಿಯನ್ನು ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ರಾಜ್ಯಪಾಲರ ಅಂಕಿತ ಹಾಕಿದ ನಂತರ ಬಿಡುಗಡೆ ಮಾಡುವುದು ನಿಮಯ ಎಂದು ತಿಳಿಸಿದರು.
2015ರಿಂದ ಇದುವರೆಗೆ 2,144 ಜನರನ್ನು ಸನ್ನಡತೆ ಆಧಾರ ಮೇಲೆ ಬಿಡುಗಡೆ ಮಾಡಲಾಗಿದೆ. ಎಲ್ಲರೂ ಕೂಡ ಉತ್ತಮವಾದ ಜೀವನ ನಡೆಸುತ್ತಿದ್ದಾರೆ. ಯಾರೋ ಒಬ್ಬರು, ಇಬ್ಬರು ಮತ್ತೆ ಅದೇ ತಪ್ಪು ಮಾಡಿರುತ್ತಾರೆ. ಅಂತಹವರಿಗೆ ಶಿಕ್ಷೆ ಕೂಡ ಆಗಿದೆ. ಹೆಚ್ಚಿನಂಶ ಬದಲಾವಣೆ ಮಾಡಿಕೊಂಡು ಸಮಾಜದಲ್ಲಿ ಜೀವನ ಸಾಗಿಸುತ್ತಿದ್ದಾರೆ ಎಂದು ವಿವರಿಸಿದರು. ಇಂದು ಬಿಡುಗಡೆಯಾದವರಲ್ಲಿ ಒಬ್ಬ ಬಿ.ಎ ಮಾಡಿದ್ದಾನೆ, ಮತ್ತೊಬ್ಬರು ಕಾನೂನು ಡಿಪ್ಲೋಮಾ ಮಾಡಿದ್ದಾರೆ. ಅಲ್ಲದೇ, ಸಂಗೀತ ಕಲಿಕೆ, ಎಲೆಕ್ಟ್ರಿಲ್, ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. ಕೈದಿಗಳು ಬದಲಾವಣೆ ಆಗಲು ಅವಕಾಶ ಇರುತ್ತದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಜೈಲಿನ ಜಾಮರ್ ಸಮಸ್ಯೆ:ಇದೇ ವೇಳೆ, ಜೈಲಿನ ಜಾಮರ್ನಿಂದ ಸುತ್ತ-ಮುತ್ತಲಿನ ಜನರಿಗೆ ಸಮಸ್ಯೆ ಆಗುತ್ತಿದೆ ಎಂಬ ಆರೋಪದ ಕುರಿತು ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಬಳಹಷ್ಟು ಸಂದರ್ಭದಲ್ಲಿ ಜೈಲಿನ ಒಳಗೆ ಕೈದಿಗಳಿಗೆ ಫೋನ್ಗಳು ತಂದುಕೊಡುತ್ತಾರೆ. ಇದರಿಂದ ಕೈದಿಗಳು ಹೊರಗಿನವರೊಂದಿಗೆ ಮಾತನಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತದೆ. ಹೀಗಾಗಿ ಹೈರೆಸ್ಯೂಲೇಷನ್ ಜಾಮರ್ ಇರುತ್ತದೆ. ಇದು ಬೇರೆ-ಬೇರೆ ರಾಜ್ಯ, ದೇಶಗಳ ಕೈದಿಗಳು ಇದ್ದಾಗ ಅವಶ್ಯ ಕೂಡ ಇರುತ್ತದೆ. ರೆಸ್ಯೂಲೇಷನ್ ಜಾಮರ್ ವ್ಯಾಪ್ತಿಯು 800 ಮೀಟರ್ ಇರುತ್ತದೆ. ಸ್ವಭಾವಿಕವಾಗಿ ಕಾಂಪೌಂಡ್ನಿಂದ ಆಚೆ ಇರುವ ಮನೆಗಳಿಗೆ ತೊಂದರೆ ಆಗಿರುತ್ತದೆ. ಇದನ್ನು ತೆಗೆದು ಹಾಕಿದರೆ, ಕೈದಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ. ಹೆಚ್ಚು ಮಾಡಿದರೆ, ಮನೆಗಳಿಗೆ ತೊಂದರೆ ಎನ್ನುವಂತಾಗುತ್ತದೆ. ಹೀಗಾಗಿ ಜಾಮರ್ ವ್ಯಾಪ್ತಿಯು 100 ಮೀಟರ್ಗೆ ತಗ್ಗಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ:ವ್ಯಾಪಕವಾಗಿ ಹಬ್ಬುತ್ತಿರುವ ಡೆಂಗ್ಯೂ ಬಗ್ಗೆ ಸುದೀರ್ಘ ಚರ್ಚೆ; ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ