ಬೆಂಗಳೂರು:ಚುನಾವಣೆಯಲ್ಲಿ ನಾಮಪತ್ರ ತಿರಸ್ಕರಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಚುನಾವಣಾ ತಕರಾರು ಅರ್ಜಿಯ ಮೂಲಕ ಮಾತ್ರ ಪರಿಹರಿಸಲು ಸಾಧ್ಯವಿದೆ ಎಂದು ಹೈಕೋರ್ಟ್ ತಿಳಿಸಿದೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅತಿಥಿ ಉಪನ್ಯಾಸಕ ವಿ.ಎಸ್.ಮಂಜುನಾಥ್ ಎಂಬವರ ನಾಮಪತ್ರದಲ್ಲಿ ಕೆಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅವರ ನಾಮಪತ್ರವನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಿಚಾರಣೆ ನಡೆಸಿದೆ.
ಈ ಸಂದರ್ಭದಲ್ಲಿ ಸೈಯದ್ ಯಾಸಿನ್ ಮತ್ತು ಮುಖ್ಯ ಚುನಾವಣಾ ಆಯುಕ್ತರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಉಲ್ಲೇಖಿಸಿರುವ ನ್ಯಾಯಪೀಠ, ಆ ತೀರ್ಪಿನಂತೆ ಅರ್ಜಿ ತಿರಸ್ಕಾರಕ್ಕೆ ಅರ್ಹವಾಗಿದೆ. ಹಾಗಾಗಿ ವಜಾಗೊಳಿಸಲಾಗುತ್ತಿದೆ ಎಂದು ತಿಳಿಸಿತು.
ಅಲ್ಲದೆ, ಚುನಾವಣಾ ಸಮಯದಲ್ಲಿ ಯಾವುದೇ ಆಧಾರದ ಮೇಲೆ ನಾಮಪತ್ರ ತಿರಸ್ಕಾರವಾದರೂ ಸಹ ಚುನಾವಣೆಯ ಮಧ್ಯದಲ್ಲಿ ಆ ಅರ್ಜಿಗಳನ್ನು ನ್ಯಾಯಾಲಯಗಳು ಮಾನ್ಯ ಮಾಡಲು ಸಾಧ್ಯವಿಲ್ಲ. ಅರ್ಜಿದಾರರು ಚುನಾವಣೆಯ ನಂತರ ತಕರಾರು ಅರ್ಜಿ ಸಲ್ಲಿಸಿ ಕಾನೂನು ಪ್ರಕಾರ ಪರಿಹಾರ ಪಡೆದುಕೊಳ್ಳಬಹುದು ಎಂದು ಕೋರ್ಟ್ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಾಮಪತ್ರವನ್ನು ತಿರಸ್ಕರಿಸಿರುವುದು ಕಾನೂನುಬಾಹಿರ ಕ್ರಮ. ಅರ್ಜಿದಾರರು ಕೇವಲ ಅತಿಥಿ ಉಪನ್ಯಾಸಕರು. ಪೂರ್ಣ ಪ್ರಮಾಣದ ಸರ್ಕಾರಿ ನೌಕರರಲ್ಲ. ಅವರ ಸೇವೆಗೆ ಅನುಗುಣವಾಗಿ ಸರ್ಕಾರ ತಿಂಗಳಿಗೆ ಇಂತಿಷ್ಟು ಎಂದು ಗೌರವಧನವನ್ನು ನೀಡಲಾಗುತ್ತದೆ. ಹಾಗಾಗಿ ಅವರ ಹೆಸರನ್ನು ಮತಪೆಟ್ಟಿಗೆಯಲ್ಲಿ ಮುದ್ರಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಸರ್ಕಾರದ ಪರ ವಕೀಲರು, ನಾಮಪತ್ರ ತಿರಸ್ಕಾರ ವಿಷಯದಲ್ಲಿ ರಿಟ್ ಅರ್ಜಿ ಮಾನ್ಯವಲ್ಲ. ಅರ್ಜಿದಾರರು ಚುನಾವಣಾ ತಕರಾರು ಅರ್ಜಿಯನ್ನೇ ಸಲ್ಲಿಸಬೇಕು ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ:ವಿ.ಎಸ್.ಮಂಜುನಾಥ್ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದರು. ಅದರ ಜೊತೆಗೆ ಫಾರಂ ನಂಬರ್ 26 ಸಲ್ಲಿಸಿದ್ದರು. ಆದರೆ, ಚುನಾವಣಾಧಿಕಾರಿ ಸಂವಿಧಾನದ ಕಲಂ 120 (ಐ) ಪ್ರಕಾರ ಲಾಭದಾಯಕ ಹುದ್ದೆ ಹೊಂದಿದ್ದಾರೆ. ಅರ್ಜಿದಾರರು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಾಮಪತ್ರ ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಪೆಪ್ಪರ್ ಸ್ಪ್ರೇ ಅಪಾಯಕಾರಿ ಆಯುಧ ಎಂದ ಹೈಕೋರ್ಟ್: ಪ್ರಕರಣ ರದ್ದತಿಗೆ ನಿರಾಕರಣೆ - Pepper Spray