ಚಾಮರಾಜನಗರ: ಕಾವೇರಿ ಹೊರಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಹ ಭೀತಿಯಲ್ಲಿದ್ದ ಕೊಳ್ಳೇಗಾಲ ತಾಲೂಕಿನ 9 ಗ್ರಾಮಗಳು ಪಾರಾಗಿವೆ.
ಕಾವೇರಿ ನದಿ ಪಾತ್ರದಲ್ಲಿ ಬರುವ ಕೊಳ್ಳೇಗಾಲ ತಾಲೂಕಿನ ದಾಸನಪುರ, ಮುಳ್ಳೂರು, ಹಳೆ ಅಣಗಳ್ಳಿ, ಹಳೆ ಹಂಪಾಪುರ ಮತ್ತು ಹರಳೆ ಗ್ರಾಮದ ಪ್ರದೇಶಗಳಲ್ಲಿ ಪ್ರವಾಹ ನೀರಿನ ಪ್ರಮಾಣ ಗಣನೀಯವಾಗಿ ತಗ್ಗಿದೆ.
ಪ್ರಸ್ತುತ ಕಾವೇರಿ ಜಲಾನಯನ ದಂಡೆಯಲ್ಲಿ ಕಂಡುಬರುವ ಯಾವುದೇ ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಇಲ್ಲ. ಪ್ರಾಥಮಿಕ ವರದಿಯಂತೆ, ಮೂಲ ಸೌಕರ್ಯ ಹಾನಿ, ಜನ-ಜಾನುವಾರುಗಳು ಹಾಗು ವಾಸದ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಡಿಸಿ ಶಿಲ್ಪಾನಾಗ್ ಮಾಹಿತಿ ನೀಡಿದ್ದಾರೆ.
ಕೃಷಿ, ತೋಟಗಾರಿಕೆ ಮತ್ತು ಕಂದಾಯ ಅಧಿಕಾರಿಗಳಿಂದ ಪ್ರವಾಹದಿಂದಾದ ಬೆಳೆ ಹಾನಿಯ ಬಗ್ಗೆ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಜಿಲ್ಲಾಡಳಿತದ ವತಿಯಿಂದ ಪ್ರವಾಹದ ವಿಸ್ತಾರ ಹಾಗೂ ಪ್ರಭಾವಗಳನ್ನು ತಿಳಿಯುವ ಸಲುವಾಗಿ ಡ್ರೋನ್ ಸರ್ವೆ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ನದಿ ಪಾತ್ರಗಳಿಗೆ ಸಾರ್ವಜನಿಕರು ತೆರಳದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರೆಸಲಾಗಿದೆ. ನದಿ ದಂಡೆಯಲ್ಲಿ ಹಾಗೂ ದಾಸನಪುರ ಸೇತುವೆಗಳಲ್ಲಿ ಪೊಲೀಸರನ್ನು ನಿಯೋಜಿಸಿ ಸೆಲ್ಫಿ, ಫೋಟೊ ತೆಗೆಯಲು ಬರುವ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಇದನ್ನೂ ಓದಿ:ಮಂಡ್ಯ: ಕೆಆರ್ಎಸ್ ಭರ್ತಿ, ಕಾವೇರಿಗೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ - bagina to krs dam