ಬೆಳಗಾವಿ:ಬಿಜೆಪಿಯಲ್ಲಿನ ಬಂಡಾಯದಿಂದ ನಮಗೆ ಅನುಕೂಲ ಆಗಬಹುದು. ಇಡೀ ರಾಜ್ಯದಲ್ಲಿ ಬಂಡಾಯದಿಂದ ಬಿಜೆಪಿಗೆ ಸಮಸ್ಯೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿನ ಬಂಡಾಯ ಕಾಂಗ್ರೆಸ್ಗೆ ಅನುಕೂಲ ಆಗಬಹುದಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಕಡಿಮೆ ಇರುವ ಬಗ್ಗೆ ಮಾತನಾಡಿ, ಅದು ನಿಜ, ಅದರಲ್ಲಿ ಬೇರೆ ಪ್ರಶ್ನೆ ಇಲ್ಲ. ಆದರೆ, ಸಂಘಟನೆ ಹೆಚ್ಚಿಸಲು ನಮ್ಮ ಕಾರ್ಯಕರ್ತರಿಗೆ ಟಾಸ್ಕ್ ಕೊಟ್ಟಿದ್ದೇವೆ. ಈ ಬಾರಿ ಹೆಚ್ಚು ವೋಟ್ ಪಡೆದುಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟಿಕೆಟ್ ಫೈನಲ್ ಆಗಿದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಇನ್ನು ಅಧಿಕೃತ ಘೋಷಣೆ ಆಗಬೇಕಲ್ಲವೇ? ಯಾವಾಗ ಆಗುತ್ತೋ ಗೊತ್ತಿಲ್ಲ. ಅದು ದೆಹಲಿಯವರಿಗೆ ಗೊತ್ತು. ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಯಾರೇ ನಿಂತರೂ ಪಕ್ಷದ ಅಭ್ಯರ್ಥಿ ಗೆಲ್ಲಿಸೋದು ನಮ್ಮ ಜವಾಬ್ದಾರಿ ಎಂದು ಹೇಳಿದರು.
ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಯತ್ನಾಳ್ ಹೆಸರು ಕೇಳಿ ಬರುತ್ತಿದೆ ಎಂಬ ವಿಚಾರವಾಗಿ ಮಾತನಾಡಿ, ನಾವು ಬಿಜೆಪಿ ಪಕ್ಷ ಅಂತಾ ಅಷ್ಟೇ ನೋಡುತ್ತೇವೆ ಹೊರತು ವ್ಯಕ್ತಿಗತವಾಗಿ ಅಲ್ಲ. ಯಾರೇ ಅಭ್ಯರ್ಥಿ ಆದರೂ ಬಿಜೆಪಿ ಪಕ್ಷ ಅಂತಾನೇ ತಿಳಿದುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು. ಶೆಟ್ಟರ್ ಗೋಬ್ಯಾಕ್ ಅಭಿಯಾನ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಷಯ. ಯಾರೇ ಬಂದರೂ ನಾವು ಎದುರಿಸಲು ತಯಾರಿದ್ದೇವೆ. ಚುನಾವಣೆಗೆ ಇನ್ನು 45 ದಿನಗಳಿದ್ದು, ಅಲ್ಲಿಯವರೆಗೂ ನಮ್ಮ ಪರವಾಗಿ ವಾತಾವರಣ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.